ಮೈಸೂರು,ಮಾರ್ಚ್.12.(ಕರ್ನಾಟಕ ವಾರ್ತೆ):- ಕಾವೇರಿ ಕಲಾ ಗ್ಯಾಲರಿಯನ್ನು ಕಲಾ ಕೇಂದ್ರವಾಗಿ ಕಟ್ಟಿಸಬೇಕೆಂದು ಸುಮಾರು 150 ಕೋಟಿ ರೂಪಾಯಿಗಳಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತçದ ಸಚಿವರಾದ ಸಿ.ಪಿ ಯೋಗೇಶ್ವರ್ ಅವರು ಹೇಳಿದರು.
ಶುಕ್ರವಾರದಂದು ವಸ್ತುಪ್ರದರ್ಶನ ಪ್ರಾಧಿಕಾರದ ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿಗೆ ಭೇಟಿ ನೀಡಿದ ಸಿ.ಪಿ. ಯೋಗೀಶ್ವರ್ ಅವರು ಕಲಾ ಗ್ಯಾಲರಿಯನ್ನು ಕುರಿತು ಮಾತನಾಡಿದರು.
ಕೇಂದ್ರ ಸರ್ಕಾರದ ನೆರವಿನಿಂದ ನಿರ್ಮಾಣಗೊಂಡಿರುವ ಕಾವೇರಿ ಕಲಾ ಕೇಂದ್ರ ಗ್ಯಾಲರಿಯು ಕಾವೇರಿ ನದಿಯ ಉದ್ದಗಲಕ್ಕೂ ಇರುವಂತಹ ನದಿಯ ಓಟ ಕರ್ನಾಟಕ ಮತ್ತು ತಮಿಳುನಾಡಿನ ಒಂದು ಸಾಂಸ್ಕೃತಿಕ ಮತ್ತು ಐತಿಹಾಸಿಕ ಚಿತ್ರಣ ಗ್ಯಾಲರಿಯಲ್ಲಿ ಸಂಪೂರ್ಣವಾಗಿ ದೊರೆಯುತ್ತದೆ ಎಂದರು.
ಕಾವೇರಿ ನದಿಯ ಹುಟ್ಟಿನಿಂದ ಹಿಡಿದು ಸಮುದ್ರ ಸೇರುವವರೆಗೆ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಪರಿಚಯ ಇಲ್ಲಿ ಸಿಗುತ್ತದೆ ಎಂದು ತಿಳಿಸಿದರು.
ಹಾಗಾಗಿ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಮತ್ತು ಕಾವೇರಿಯನ್ನು ಕೌತುಕದಿಂದ ನೋಡುವವರಿಗೆ ಇದು ಗಮನ ಸೆಳೆಯುವ ಕಲಾ ಕೇಂದ್ರ ವಾಗಲಿದ್ದು, ಉದ್ಘಾಟನೆಗೆ ಸಿದ್ಧವಿದೆ ಎಂದು ತಿಳಿಸಿದರು.









