ಬೆಂಗಳೂರು: ವೆಸ್ಟರ್ನ್ ಡಿಜಿಟಲ್ ಇಂಡಿಯಾದ ಬೆಂಗಳೂರು ಕೇಂದ್ರ 1 ಟಿಬಿ ಮೈಕ್ರೊ ಎಸ್‌ಡಿ ಕಾರ್ಡ್ ಅಭಿವೃದ್ಧಿ ಪಡಿಸಿದ್ದು, ಐಟಿ-ಬಿಟಿ ನಗರಕ್ಕೆ ಇದು ಹೆಮ್ಮೆಯ ವಿಷಯ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ವೆಸ್ಟರ್ನ್ ಡಿಜಿಟಲ್ ಇಂಡಿಯಾದ ಮುಖ್ಯಸ್ಥೆ ಸುಪ್ರಿಯಾ ದಾಂಡ ಅವರ ಜತೆ ಮಂಗಳವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ನಂತರ ಅವರು ಮಾತನಾಡಿದರು.
“ತಂತ್ರಜ್ಞಾನ ವಲಯದ ಮಹತ್ವದ ಆವಿಷ್ಕಾರ ಬೆಂಗಳೂರಿನಲ್ಲಿಆಗಿದೆ ಎಂಬುದು ಕರ್ನಾಟಕ ಸರ್ಕಾರಕ್ಕೆ ಹಾಗೂ ಬೆಂಗಳೂರಿನ ನಿವಾಸಿಗಳಿಗೆ ಹೆಮ್ಮೆಯ ವಿಚಾರ. ಬೆಂಗಳೂರನ್ನು ದಕ್ಷಿಣ ಏಷ್ಯಾದ ಆವಿಷ್ಕಾರ ಕೇಂದ್ರವನ್ನಾಗಿಸುವುದು ಐಟಿ-ಬಿಟಿ ಇಲಾಖೆಯ ಗುರಿ ಈ ನಿಟ್ಟಿನಲ್ಲಿ ಉದ್ದಿಮೆಗಳಿಂದ ಸಲಹೆ, ಅಭಿಪ್ರಾಯ ಪಡೆಯಲು ಇಲಾಖೆ ಉತ್ಸುಕವಾಗಿದೆ ಎಂಬ ವಿಷಯವನ್ನು ಸಭೆಯಲ್ಲಿ ತಿಳಿಸಲಾಗಿದೆ,”ಎಂದು ಅವರು ಹೇಳಿದರು.
“1 ಟಿಬಿ ಮೈಕ್ರೊ ಎಸ್‌ಡಿ ಕಾರ್ಡ್‌ಗಳ ಉತ್ಪಾದನೆ ಹೊರ ದೇಶದಲ್ಲಿ ಆಗುತ್ತಿದ್ದು, ಭಾರತದಲ್ಲಿ ಈ ಘಟಕಗಳನ್ನು ಉತ್ಪಾದಿಸುವ ಯೋಜನೆ ಕಾರ್ಯರೂಪಕ್ಕೆ ತರುವುದಾದರೆ ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ಸಹಕಾರ, ಸೌಲಭ್ಯ ಒದಗಿಸುವ ಭರವಸೆ ನೀಡಲಾಗಿದೆ. ಕರ್ನಾಟಕ ಹೂಡಿಕೆ ಸ್ನೇಹಿ ಆಡಳಿತ ಇರುವ ರಾಜ್ಯವಾಗಿದ್ದು, ಉದ್ಯಮಿಗಳು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ,”ಎಂದು ಅವರು ತಿಳಿದರು.
ಕ್ಯಾಲಿಫೋರ್ನಿಯಾ ಮೂಲದ ವೆಸ್ಟರ್ನ್ ಡಿಜಿಟಲ್ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಲ್ಲಿ 3000 ಉದ್ಯೋಗಿಗಳಿದ್ದಾರೆ.









