ಮಂಗಳೂರು:ಬಜೆಟ್ ಮಂಡನೆ ಹಾಗು ಕೆಪಿಸಿಸಿಗೆ ನೂತನ ಸಾರಥಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದಂತೆ ಮಂಗಳೂರಿಗೆ ದೌಡಾಯಿಸಿದ ಡಿಸಿಎಂ ಡಾ.ಜಿ ಪರಮೇಶ್ವರ್ ಮಾಜಿ ಸಿಎಂ ಹಾಗು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದರು.
ಧರ್ಮಸ್ಥಳದ ಶಾಂತಿವನದಲ್ಲಿರುವ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ ನೀಡಿದರು.ಪ್ರಕೃತಿ ಚಿಕತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.ಪ್ರಕೃತಿ ಚಿಕಿತ್ಸಾಲಯದ ಕೊಠಡಿಯಲ್ಲಿ ಉಭಯ ನಾಯಕರು ಕೆಲಕಾಲ ರಹಸ್ಯ ಮಾತುಕತೆ ನಡೆಸಿದರು.ಈ ವೇಳೆ ಇತರ ಯಾವುದೇ ನಾಯಕರಿಗೆ ಕೊಠಡಿಗೆ ಪ್ರವೇಶ ನೀಡಲಿಲ್ಲ.
ಸಾಲಮನ್ನಾ, ನಿಗಮ ಮಂಡಳಿ ವಿಚಾರದಲ್ಲಿ ನಿರ್ಣಾಯಕ ಮಾತುಕತೆ ನಡೆಸಲಾಯಿತು ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿದ ಪರಮೇಶ್ವರ್,
ಆದಷ್ಟು ಬೇಗ ನಿಗಮ ಮಂಡಳಿಗೆ ನೇಮಕ ಮಾಡ್ತೀವಿ ಸಮನ್ವಯ ಸಮಿತಿಯಲ್ಲೇ ಈ ಬಗ್ಗೆ ನಿರ್ಧಾರ ಆಗಿದೆ,ಸರ್ಕಾರ, ಇಲಾಖೆಗಳ ಕೆಲಸ ಪ್ರಾರಂಭ ಆಗಿದೆ,ದೇವರ ದಯೆಯಿಂದ ಈ ಬಾರಿ ಒಳ್ಳೆ ಮಳೆ ಬರ್ತಿದೆ,ಮಾನ್ಸೂನ್ ಉತ್ತಮ ಆಗಿದ್ದರಿಂದ ಬರದ ಸಮಸ್ಯೆ ಇಲ್ಲ ಎಂದರು.
ಕೆಪಿಸಿಸಿಗೆ ಸೂಕ್ತ ವ್ಯಕ್ತಿಯನ್ನು ಹೈಕಮಾಂಡ್ ಆರಿಸಲಿದೆ ಈ ಬಗ್ಗೆ ಯಾವುದೇ ಗೊಂದಲ ಬೇಡ,ಪಕ್ಷದಲ್ಲಿ ಆಕಾಂಕ್ಷಿಗಳು ಇದ್ದಾರೆ ಆದರೆ ಯಾರಲ್ಲೂ ಯಾವುದೇ ರೀತಿಯ ಅಸಮಧಾನ ಇಲ್ಲ ಎಂದರು.









