ಬೆಂಗಳೂರು:ಕಲಾಪವನ್ನು ಹೇಗೆ ನಡೆಸಬೇಕು, ಸದನವನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಹಾಗು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿಗೆ ರಾಜ್ಯಪಾಲ ವಜುಭಾಯ್ ವಾಲಾ ಸ್ಪೆಷಲ್ ಕ್ಲಾಸ್ ತೆಗೆದುಕೊಂಡರು.
ಸೋಮವಾರದಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಜಂಟಿ ಅಧಿವೇಶಕ್ಕೆ ಅಧಿಕೃತ ಆಹ್ವಾನ ನೀಡಲು ಉಭಯ ಸದನಗಳ ಅಧ್ಯಕ್ಷರು ರಾಜಭವನಕ್ಕೆ ಭೇಟಿ ನೀಡಿದ ವೇಳೆ ಕೆಲವೊಂದು ಉದಾಹರಣೆಗಳ ಸಮೇತ ರಾಜ್ಯಪಾಲರು ಕಲಾಪ ಪಾಠ ಬೋಧನೆ ಮಾಡಿದ ಘಟನೆ ನಡೆಯಿತು.
ಒಂದು ಗಂಟೆಗಳ ಕಾಲ ಸಭಾಪತಿ, ಸ್ಪೀಕರ್ ಹುದ್ದೆ ನಿಭಾಯಿಸುವ ಕುರಿತು ರಾಜ್ಯಪಾಲರು ಅನುಭವ ಧಾರೆ ಎರೆದಿದ್ದಾರೆ.ವಜುಭಾಯ್ ವಾಲಾ ಸಹ ಈ ಹಿಂದೆ ಗುಜರಾತ್ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ರು.ಸ್ಪೀಕರ್ ಆಗಿದ್ದ ವೇಳೆ ವಾಲಾ ಕೈಗೊಳ್ಳುತ್ತಿದ್ದ ಕಾರ್ಯತಂತ್ರದ ಬಗ್ಗೆ ಪಾಠ ಮಾಡಿದರು.
ಸದನಕ್ಕೆ ಗೈರಾಗುತ್ತಿದ್ದ ಶಾಸಕರಿಗೆ ವಾಲಾ ಖಡಕ್ ಎಚ್ಚರಿಕೆ ನೀಡಿತ್ತಿದ್ದದ್ದು,ಸದನದ ವಿಡಿಯೋ ವೀಕ್ಷಿಸಿ ಗೈರಾದ ಶಾಸಕರ ಅಂದಿನ ವೇತನ ಕಟ್ ಮಾಡುತ್ತಿದ್ದದ್ದು,ವಿಧೇಯಕ ಮಂಡನೆ ವೇಳೆ ಅನಗತ್ಯ ವಿಚಾರ ಚರ್ಚೆಗೆ ಅವಕಾಶ ಕೊಡದಂತೆ ನೋಡಿಕೊಳ್ಳುತ್ತಿದ್ದ ಕುರಿತು ಮಾಹಿತಿ ನೀಡಿ ಕೆಲ ಟಿಪ್ಸ್ ನೀಡಿದರು.
ಆಡಳಿತ ಪಕ್ಷದ ಸದಸ್ಯರ ಆರ್ಭಟಕ್ಕೆ ಕಡಿವಾಣ ಹಾಕಬೇಕು.
ನಮ್ಮವರೆಂಬ ಸಲುಗೆ ಸದನದಲ್ಲಿ ಸರ್ವತಾ ಸಲ್ಲದು, ಯಾವುದೇ ಚರ್ಚೆ ವೇಳೆ ಸ್ಪೀಕರ್, ಸಭಾಪತಿ ಮುಖ ನೋಡಿ ಮಾತ್ನಾಡಬೇಕು.ಹೀಗೆ ಸದನದ ಗಾಂಭಿರ್ಯತೆ, ಶಿಸ್ತು, ಸಮಯ ಹೊಂದಾಣಿಕೆ ಬಗ್ಗೆ ವಾಲಾ ಸ್ಪೇಶಲ್ ಕ್ಲಾಸ್ ತೆಗೆದುಕೊಂಡರು.
ಏನೋ ಅಂದುಕೊಂಡು ಹೋದ ಸ್ಪೀಕರ್ ರಮೇಶ ಕುಮಾರ್, ಸಭಾಪತಿ ಹೊರಟ್ಟಿಗೆ ವಾಲಾ ಮಾತು ಕೇಳಿ ಆಶ್ಚರ್ಯವಾಯಿತು.ಎಲ್ಲಾ ಮಾತುಕತೆ ಮುಗಿದ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಅಂತ ಇಬ್ಬರು ನಾಯಕರು ಕೇಳಿದರು.ಇದಕ್ಕೆ ನನ್ನದೇನಿದೆ ಎಲ್ಲಾ ಆ ಭಗವಂತನದು ಎಂದು ನಗುತ್ತಾ ಹೇಳಿ ವಜುಬಾಯ್ ವಾಲಾ ಸ್ಪೀಕರ್ ಮತ್ತು ಸಭಾಪತಿಯನ್ನು ಬೀಳ್ಕೊಟ್ಟರು.









