ನವದಹಲಿ: ಅಮೆರಿಕಾ ವಿದೇಶಾಂಗ ನೀತಿಯ ವಿಶೇಷ ಅಧ್ಯಯನಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ರಾಜೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.
ಜಪಾನ್ ದೇಶದ ಪೂರ್ವ ಅಧೀನ ರಾಯಭಾರಿ ಹಾಗು ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಂತೀಯ ಪಾಸ್ ಪೋರ್ಟ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ ನಾಯ್ಕ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ನೀತಿಯ ವಿಶೇಷ ಅಧ್ಯಯನಕ್ಕಾಗಿ ಏಷಿಯ ಫೌಂಡೇಶನ್ ಸಂಸ್ಥೆಯಿಂದ ಆಯ್ಕೆಗೊಂಡ ಏಕೈಕ ಭರತೀಯ ಅಧಿಕಾರಿಯಾಗಿದ್ದಾರೆ.
ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಒಂದು ತಿಂಗಳ ತರಬೇತಿ ಪಡೆಯುತ್ತಿರುವ ಕರ್ನಾಟಕದ ಹೆಮ್ಮೆಯ ಅಧಿಕಾರಿ ರಾಜೇಶ್ ನಾಯ್ಕ ಭಾರತ ಮತ್ತು ಅಮೇರಿಕಾ ದೇಶಗಳ ನಡುವಿನ ವಿದೇಶಾಂಗ ವ್ಯವಹಾರಗಳ ಸಂಬಂಧ ಅಭಿವೃದ್ದಿಗೆ ಶ್ರಮಿಸಲಿದ್ದಾರೆ.
ರಾಜೇಶ್ ನಾಯ್ಕ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಉತ್ತರ ಕನ್ನಡ ಜಿಲ್ಲೆಯ ವಕೀಲರಾದ ಎನ್.ಡಿ ನಾಯ್ಕರವರ ಪುತ್ರ.ಸ್ನಾತಕೋತ್ತರ ಪದವೀಧರರಾದ ರಾಜೇಶ ನಾಯ್ಕ್ 2010 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಮೂಲಕ ಭಾರತೀಯ ವಿದೇಶಾಂಗ ಸೇವೆಗೆ ಆಯ್ಕೆಯಾಗಿದ್ದ ಅಧಿಕಾರಿ. ಜಪಾನಿನ ಭಾರತೀಯ ರಾಯಭಾರಿ ಕಛೇರಿಯಲ್ಲಿ ಕಾರ್ಯದರ್ಶಿಯಾಗಿ ಸುಮಾರು 4 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ದೇಹಲಿಯ ವಿದೇಶಾಂಗ ಮಂತ್ರಾಲಯದಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ಪ್ರಾಂತೀಯ ಪಾಸ್ ಪೋರ್ಟ್ ಕಛೇರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.









