4800 ಪ್ರಾಧ್ಯಾಪಕ,ಸಹ ಪ್ರಾಧ್ಯಾಪಕರ ನೇಮಕ: ಜಿ.ಟಿ ದೇವೇಗೌಡ

0
491

ಬೆಂಗಳೂರು:ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ 4800 ವಿವಿಧ ಹುದ್ದೆಗಳು ತಮ್ಮ ಇಲಾಖೆಯಲ್ಲಿ ಖಾಲಿ ಇದ್ದು, ಆದ್ಯತೆ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಸಭೆಗೆ ತಿಳಿಸಿದರು.

ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಾ.ಉಮೇಶ್ ಜಿ.ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ 3800 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಖಾಲಿ ಇವೆ. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇವೆ. ಪ್ರಾಂಶುಪಾಲರ ಹುದ್ದೆ ಖಾಲಿ ಇರುವ ಕಾಲೇಜುಗಳಲ್ಲಿ ಉಸ್ತುವಾರಿ ಪ್ರಾಂಶುಪಾಲರನ್ನು ನೇಮಕ ಮಾಡಲಾಗಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ನೇಮಕಗೊಂಡಿರುವ ಉಪನ್ಯಾಸಕರನ್ನು ಹಳೇ ಮೈಸೂರು ಭಾಗಕ್ಕೆ ಡೆಪ್ಟೇಷನ್ ಮೇಲೆ ನೇಮಕ ಮಾಡಿರುವ ಬಗ್ಗೆ ಪರಿಶೀಲನೆ ಮಾಡಿ ತುರ್ತು ಕ್ರಮ ಕೈಗೊಳ್ಳುವುದಾಗಿ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರ ಪ್ರಶ್ನೆ ಸಂದರ್ಭದಲ್ಲಿ ಶಾಸಕ ಬಿ.ಸಿ.ಪಾಟೀಲ್ ಕೇಳಿದ ಉಪ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ನಮ್ಮ ಸರ್ಕಾರ ಯಾವುದೇ ಉಪನ್ಯಾಸಕರನ್ನು ವರ್ಗಾವಣೆ ಮಾಡುವುದಾಗಲಿ, ಅನ್ಯ ಸೇವೆ ಮೇಲೆ ನಿಯೋಜನೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಂಡ್ಯದ ಬಸರಾಳುವಿನಲ್ಲಿ ಇರುವ ಸರ್ಕಾರಿ ಪ್ರೌಢಶಾಲೆ ಕಟ್ಟಡದಲ್ಲಿ ಪದವಿ ಕಾಲೇಜು ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು 2.43 ಕೋಟಿ ಅನುದಾನ ಬೇಕಾಗಿದ್ದು, ಅನುದಾನ ಲಭ್ಯತೆ ಆಧರಿಸಿ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.

ಪದವಿ ಕಾಲೇಜುಗಳಲ್ಲಿ ಮೇ 30ರೊಳಗೆ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಜೂ.30ರೊಳಗೆ ಫಲಿತಾಂಶ ಪ್ರಕಟಿಸಲು ನಿರ್ದೇಶಿಸಲಾಗಿದೆ ಎಂದು ಶಾಸಕ ಅಭಯ್‍ಪಾಟೀಲ್ ಅವರ ಪ್ರಶ್ನೆಗೆ ಸಚಿವ ದೇವೇಗೌಡರು ಉತ್ತರಿಸಿದರು.

ಎಲ್ಲಾ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳ ದಾಖಲಾತಿ, ಪರೀಕ್ಷಾ ವೇಳಾಪಟ್ಟಿ ಮತ್ತು ಫಲಿತಾಂಶ ಪ್ರಕಟಣೆಯಲ್ಲಿ ಏಕರೂಪತೆ ತರಲು ಸರ್ಕಾರ ವೇಳಾ ಪಟ್ಟಿ ನಿಗದಿಪಡಿಸಿ ಆದೇಶಿಸಿದೆ.

ಫಲಿತಾಂಶ ಪ್ರಕಟಣೆ ಮತ್ತು ಅಂಕಪಟ್ಟಿ ವಿತರಣೆಯಲ್ಲಿ ಉಂಟಾಗುವ ತೊಂದರೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಂಜನಿಯರಿಂಗ್ ಸೀಟ್‍ಗಳ ಕೌನ್ಸಲಿಂಗ್ ಪ್ರಾರಂಭಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

- Call for authors -

LEAVE A REPLY

Please enter your comment!
Please enter your name here