ಚಿಂದ್ವಾರ:ದೇಶದಲ್ಲಿ ಹೆಣ್ಣುಮಕ್ಕಳಿಗೆ ಪೂರಕವಾದ ವಾತಾವರಣವಿಲ್ಲ ಎಂಬ ಕೂಗು ಹೆಚ್ಚುತ್ತಿರುವ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. 14 ವರ್ಷದ ಅಪ್ರಾಪ್ತೆಯ ಮೇಲೆ ಐವರು ಅತ್ಯಾಚಾರ ಎಸಗಿರುವ ಪ್ರಕರಣ ಚಿಂದ್ವಾರದಲ್ಲಿ ನಡೆದಿದ್ದು, ಐವರು ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
14 ವರ್ಷದ ಹುಡುಗಿ ಕಳೆದ ಶುಕ್ರವಾರ ಸಂಜೆ ತನ್ನ ಮನೆಯಿಂದ ಹೊರಹೋದವಳು ರಾತ್ರಿಯಾದರೂ ವಾಪಾಸ್ ಬರಲಿಲ್ಲ. ಇದರಿಂದ ಭಯಭೀತರಾದ ಪೋಷಕರು ಶನಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತನಿಖೆ ಆರಂಭಿಸಿದ ಪೊಲೀಸರಿಗೆ ಆ ಹುಡುಗಿ ಭಾನುವಾರ ಮಹುವಾ ತೋಲ ಎಂಬ ಪ್ರದೇಶದಲ್ಲಿ ನಿಸ್ತೇಜ ಸ್ಥಿತಿಯಲ್ಲಿ ಆಕೆ ಸಿಕ್ಕಿದ್ದಾಳೆ. ಬಳಿಕ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆಯನ್ನು ಕೊಡಿಸಿದ ಹೇಳಿಕೆ ಪಡೆದುಕೊಳ್ಳಲಾಗಿದೆ.
ಅಪ್ರಾಪ್ತ ಕೊಟ್ಟ ಹೇಳಿಕೆ ವಿವರ:
ಮನೆಯಿಂದ ಹೊರಟ ತನಗೆ ಡ್ರಾಪ್ ನೀಡುವುದಾಗಿ ಮೋಹಿತ್ ಭಾರದ್ವಾಜ್ (22) ತನ್ನ ಬೈಕಿನಲ್ಲಿ ಕೂರಿಸಿಕೊಂಡ. ಅಲ್ಲಿಂದ ರಾಹುಲ್ ಭೋಂಡೆ (24) ಎಂಬುವವರ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಇಬ್ಬರೂ ತನ್ನ ಮೇಲೆ ಅತ್ಯಾಚಾರವೆಸಗಿದರು. ಶನಿವಾರ ಬೆಳಗ್ಗೆ ಇಬ್ಬರೂ ಮನೆಯಿಂದ ಹೊರಹೋಗಲು ಬಿಟ್ಟಾಗ ತನ್ನ ಮನೆಕಡೆಗೆ ಹೋಗುತ್ತಿದ್ದಾಗ ಬಂಟಿ ಬಳವಾಯಿ (23), ಅಂಕಿತ್ ರಘುವಂಶಿ (25) ಮತ್ತು ಅಮಿತ್ ವಿಶ್ವಕರ್ಮ (21) ಅಡ್ಡಹಾಕಿ ಪುನಃ ಭೋಂಡೆಯ ಮನೆಗೆ ಕರೆದುಕೊಂಡುಹೋದರು. ಅಲ್ಲಿ ಎಲ್ಲರೂ ಮತ್ತೆ ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ಹೇಳಿಕೆಯಲ್ಲಿ ಘಟನೆಯ ವಿವರಣೆ ನೀಡಿದ್ದಾಳೆ.
ಐವರು ಆರೋಪಿಗಳ ವಿರುದ್ಧ ಗ್ಯಾಂಗ್ ರೇಪ್, ಅಪಹರಣ, ಕ್ರಿಮಿನಲ್ ಬೆದರಿಕೆ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ನಿಯೋಜನೆ ಮಾಡಲಾಗಿದೆ.
6 ವರ್ಷಗಳ ಹಿಂದೆ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕ್ರೂರವಾಗಿ ವರ್ತಿಸಿದ್ದ ಘಟನೆಯನ್ನು ದೇಶಕ್ಕೆ ದೇಶವೇ ಖಂಡಿಸಿತ್ತು. ಆ ನಿರ್ಭಯಾ ಪ್ರಕರಣಕ್ಕೆ ನಿನ್ನೆಯಷ್ಟೇ ತೀರ್ಪು ಘೋಷಿಸಿರುವ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದೆ. ಇದರಿಂದಾಗಿ ಅತ್ಯಾಚಾರಿಗಳಿಗೆ ಕಾನೂನಿನ ಬಗ್ಗೆ ಸ್ವಲ್ಪವಾದರೂ ಭಯ ಹುಟ್ಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಿರ್ಭಯಾ ತೀರ್ಪು ಬರುವ ಹಿಂದಿನ ದಿನ ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ ತಲೆತಗ್ಗಿಸುವಂತೆ ಮಾಡಿದೆ.









