ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಧ್ಯಾಹ್ನ ಉಭಯ ಸದನಗಳ ಶಾಸಕರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೋಜನ ಕೂಟವನ್ನು ಏರ್ಪಡಿಸಿದ್ದರು.
ಸಿಎಂ ಕುಮಾರಸ್ವಾಮಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. ಸ್ಪೀಕರ್ ರಮೇಶ್ ಕುಮಾರ್, ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಸಚಿವರು, ಶಾಸಕರು ಭೋಜನಕೂಟದಲ್ಲಿ ಭಾಗವಹಿಸಿದ್ದರು.
ಸಿದ್ದು, ಬಿಎಸ್ವೈ ಬರಮಾಡಿಕೊಂಡ ಸಿಎಂ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವರೆಗೂ ಬ್ಯಾಕ್ವೆಂಟ್ ಹಾಲ್ ದ್ವಾರದ ಮುಂದೆ ನಿಂತಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಬಂದ ಬಳಿಕ ಕೈ ಹಿಡಿದು ಟೇಬಲ್ ಬಳಿ ಹತ್ತಿರ ಕರೆದುಕೊಂಡು ಹೋದರು.
ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸ್ವಲ್ಪ ತಡವಾಗಿ ಭೋಜನ ಕೂಟಕ್ಕೆ ಆಗಮಿಸಿದರು. ಸಿದ್ದರಾಮಯ್ಯ ಜೊತೆ ಊಟ ಮಾಡುತ್ತಿದ್ದ ಕುಮಾರಸ್ವಾಮಿ ಅರ್ಧಕ್ಕೆ ಊಟ ಬಿಟ್ಟು ಬಂದು ಬಿ.ಎಸ್.ಯಡಿಯೂರಪ್ಪರನ್ನು ಬರಮಾಡಿಕೊಂಡರು. ಬಳಿಕ ತಾವು ಕೂತಿದ್ದ ಸೀಟಿನಲ್ಲೇ ಯಡಿಯೂರಪ್ಪರನ್ನು ಕೂರಿಸಿದರು.
ಯಡಿಯೂರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ರಮೇಶ್ ಕುಮಾರ್ ಜತೆ ಕೂತು ಭೋಜನ ಸ್ವೀಕರಿಸಿದರು. ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಯು.ಟಿ.ಖಾದರ್, ಜಮೀರ್ ಅಹಮ್ಮದ್ ಖಾನ್, ಎನ್.ಮಹೇಶ್, ಎಚ್.ಕೆ.ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.









