ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಮಾಫಿಯಾ ಹೆಚ್ಚುತ್ತಿದೆ. ವೀಸಾ ಮುಗಿದರು ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಕೆಲವು ಫಾರ್ಮ್ ಹೌಸ್‌ಗಳಲ್ಲೂ ಗಾಂಜಾ ಬೆಳೆಯಲಾಗುತ್ತಿದೆ. ಈ ವಿಚಾರ ಪೊಲೀಸರಿಗೆ ತಿಳಿದಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ! ಹೀಗೆ ರಾಜ್ಯದಲ್ಲಿ ಹರಡಿರುವ ಡ್ರಗ್ ಮಾಫಿಯಾ ಕುರಿತು ವಿಧಾನಸಭೆಯಲ್ಲಿ ಇಂದು ಬಿಸಿ ಬಿಸಿ ಚರ್ಚೆ ನಡೆಯಿತು.
ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಮಗನೇ ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದ. ಅವನನ್ನು ಅದರಿಂದ ಹೊರತರಬೇಕಾದರೆ ನಾವು ಪಟ್ಟ ಶ್ರಮ ಅಶಿಷ್ಟಲ್ಲ. ಡ್ರಗ್ ದಂಧೆ ವಿರುದ್ದ ಕ್ರಮ ಆಗಲೇಬೇಕು ಬಿಜೆಪಿಯ ಕಳಕಪ್ಪ ಬಂಡಿ ವಿಧಾನಸಭೆಯಲ್ಲಿ ತಮ್ಮ ಸಂಕಟ ಹೊರಹಾಕಿದರು.
ರಾಜ್ಯಾದ್ಯಂತ ಹರಡಿರುವ ಡ್ರಗ್ ಮಾಫಿಯಾ ಬಗ್ಗೆ ವಿಧಾನಸಭೆಯಲ್ಲಿ ಮಾಜಿ ಗೃಹ ಸಚಿವ ಆರ್.ಅಶೋಕ್
ಸರ್ಕಾರದ ಗಮನ ಸೆಳೆದರು. ರಾಜ್ಯದಲ್ಲಿ ಐದು ಲಕ್ಷ ಮಾದಕ ವಸ್ತು ವ್ಯಸನಿಗಳಿದ್ದಾರೆ.14 ರಿಂದ 30 ವಯಸ್ಸಿನ ಯುವಕರೇ ಮಾದಕ ವಸ್ತುಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅಪಘಾತಗಳು, ಆತ್ಮಹತ್ಯೆ ಪ್ರಕರಣಗಳು, ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಮಾದಕ ವಸ್ತು ಸೇವನೆಯೇ ಕಾರಣವಾಗಿದೆ ಎಂದರು.
ಅಷ್ಟೇ ಅಲ್ಲದೆ ಬನ್ನೇರುಘಟ್ಟದ ಫಾರಂಗಳಲ್ಲಿ ಗಾಂಜಾ ಬೆಳೆಯುತ್ತಾರೆ. ಇದನ್ನು ಯಾರೂ ಪತ್ತೆ ಹಚ್ಚಕ್ಕಾಗಲ್ಲ ಪೊಲೀಸರೇ ಈ ಮಾಹಿತಿ ನನಗೆ ಹೇಳಿದ್ದಾರೆ.
ಶಾಂತಿನಗರದ ಸುತ್ತಮುತ್ತವೂ ಡ್ರಗ್ಸ್ ಸೇವನೆ ಹೆಚ್ಚಿದೆ ಎಂದು ಸದನದ ಗಮನ ಸೆಳೆದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡ್ರಗ್ ಮಾಫಿಯಾದ ಅಡ್ಡೆಯಾಗಿ ಬಳಕೆಯಾಗುತ್ತಿದೆ. ಡ್ರಗ್ ಸಾಗಾಟಕ್ಕೆ ಮನುಷ್ಯರನ್ನು ಪ್ರಾಣಿಗಳ ರೀತಿ ಬಳಕೆ ಮಾಡಲಾಗುತ್ತದೆ. ಇತ್ತೀಚೆಗೆ ಉಗಾಂಡದ ವ್ಯಕ್ತಿಯೊಬ್ಬನಿಗೆ ಡ್ರಗ್ ಮಾತ್ರೆಗಳನ್ನು ನುಂಗಿಸಿ, ಹತ್ತೊಂಬತ್ತು ಗಂಟೆಗಳ ಕಾಲ ಪ್ರಯಾಣ ಮಾಡಿಸಿ, ಬೆಂಗಳೂರಿಗೆ ಡ್ರಗ್ ಸಾಗಿಸಿದ್ದಾರೆ. ಈ ರೀತಿ ಕೋಟ್ಯಂತರ ರೂಪಾಯಿ ಬೆಲೆಯ ಡ್ರಗ್ ಸಾಗಿಸಲು ಅವನಿಗೆ ಐದು ಲಕ್ಷ ರೂಪಾಯಿ ನೀಡಲಾಗಿತ್ತು ಎಂದರು.
ಬೆಂಗಳೂರು ಕೂಡ “ಉಡ್ತಾ ಪಂಜಾಬ್” ಆಗುವ ಹಾದಿಯಲ್ಲಿದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬಾರದು ಎಂದು ಗೋಡೆಮೇಲೆ ಬರೆದರೆ ಜನ ಅದರ ಮೇಲೆ ಮೂತ್ರ ಮಾಡುತ್ತಾರೆ. ಬದಲಿಗೆ ಅಲ್ಲಿ ಶನಿಮಹಾತ್ಮನ ಫೋಟೋ ಇಟ್ಟು ಇಲ್ಲಿ ಮೂತ್ರ ಮಾಡಿದ್ರೆ ಶನಿಮಹಾತ್ಮ ನಿಮ್ಮ ಮನೆ ಬಾಗಿಲಿಗೆ ಬರುತ್ತಾನೆ ಎಂದು ಬಿಂಬಿಸಿದ್ರೆ ಸಾಕು ಜನ ಹೆದರುತ್ತಾರೆ. ಹಾಗೆಯೇ ಡ್ರಗ್ ದಂಧೆ ಹೆಚ್ಚು ನಡೆಯುವ ಶಾಲೆಗಳ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗಳವರ ಮನೆ ಬಾಗಿಲಿಗೆ ಪೊಲೀಸರು ಬರುತ್ತಾರೆ ಎನ್ನುವಂತಾದರೆ ಅವರೂ ಸರಿದಾರಿಗೆ ಬರುತ್ತಾರೆ. ತಮ್ಮ ಶಾಲೆಗಳಲ್ಲಿ ಡ್ರಗ್ ದಂಧೆಗೆ ಕಡಿವಾಣ ಹಾಕುತ್ತಾರೆ ಎಂದು ಆರ್.ಅಶೋಕ್ ಸಲಹೆ ನೀಡಿದರು.
ಶಾಂತಿನಗರದ ಕ್ಷೇತ್ರದ ಶಾಸಕ ಹ್ಯಾರಿಸ್ ಮಾತನಾಡಿ, ನನ್ನ ಕ್ಷೇತ್ರದಲ್ಲೂ ಡ್ರಗ್ ಹಾವಳಿ ಜಾಸ್ತಿ ಆಗ್ತಿದೆ. ನೈಜಿರೀಯಾದಿಂದ ಬರೋರ ಬ್ಯುಸಿನೆಸ್ ಇದೆ ಆಗಿದೆ.
ಡ್ರಗ್ಸ್ ಮಾಫಿಯಾದ ವಿದೇಶಿಯರನ್ನ ಓಡಿಸಬೇಕು. ಮತ್ತೆ ಅವರು ಬರದಂತೆ ತಡೆಯಬೇಕು ಎಂದರು.
ವಿಧಾನಸಭೆಯಲ್ಲಿ ಮೊದಲ ಬಾರಿಗೆ ಡ್ರಗ್ಸ್ ಮಾಫಿಯಾ ಮತ್ತು ಅದರ ಮೂಲದ ಕುರಿತು ಬಿಜೆಪಿ ಶಾಸಕ ಭರತ್ ಶೆಟ್ಟಿ ಮಾತನಾಡಿದರು. ನಾನು ಒಂದು ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದೆ. ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ಕುರಿತು ನನ್ನ ಗಮನಕ್ಕೂ ಬಂದಿದೆ. ಡ್ರಗ್ಸ್ ಸೇವಿಸುವವರನ್ನೇ ಅರೆಸ್ಟ್ ಮಾಡ್ತಾರೆ. ಆದರೆ, ಡ್ರಗ್ಸ್ ಮಾರಾಟ ಮಾಡುವವರನ್ನು ಹಿಡಿಯಬೇಕು. ಡ್ರಗ್ಸ್ ಪೂರೈಕೆಯ ಮೂಲ ಹುಡುಕಬೇಕು. ಆಗ ಮಾತ್ರ ಮಾಫಿಯಾ ತಡೆಗಟ್ಟಬಹುದು. ಡ್ರಗ್ಸ್ ಸೇವನೆ ಮಾಡುವ ಶೇ.2 ರಷ್ಟು ಜನ ಮಾತ್ರ ಅರೆಸ್ಡ್ ಆಗ್ತಾರೆ. ಆದರೆ, ಶೇ.98 ರಷ್ಟು ಡ್ರಗ್ಸ್ ಸೇವನೆ ಮಾಡುವವರನ್ನು ಬಂಧನ ಮಾಡಕ್ಕೆ ಕಷ್ಟ ಇದೆ. ಪೊಲೀಸರಿಗೆ ಈ ನಿಟ್ಟಿನಲ್ಲಿ ಅಧಿಕಾರ ಕೊಡಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಹಾವಳಿ ತಪ್ಪಿಸಬಹುದು ಎಂದು ಹೇಳಿದರು.
ಎಲ್ಲೆಲ್ಲಿ ಡ್ರಗ್ ದಂಧೆ ನಡೆಯುತ್ತಿದೆ ಎಂಬುದು ಪೊಲೀಸರಿಗೆ ಚೆನ್ನಾಗಿ ಗೊತ್ತು. ಆದರೆ ನಾವು ಕಂಪ್ಲೆಂಟ್ ಕೊಟ್ಟಾಗ ಕ್ರಮ ಕೈಗೊಂಡಂತೆ ವರ್ತಿಸುತ್ತಾರೆ ಹೊರತು ಕ್ರಮ ಕೈಗೊಳ್ಳಲ್ಲ. ನಮ್ಮ ದೇಶವನ್ನು ಹಾಳು ಮಾಡಲು ಪಾಕಿಸ್ತಾನವೂ ಬೇಡ, ಭಯೋತ್ಪಾದಕರೂ ಬೇಡ. ಹೀಗೆ ಬಿಟ್ರೆ ನಮ್ಮ ಯುವಪೀಳಿಗೆ ಡ್ರಗ್ ಮಾಫಿಯಾಗೆ ಬಲಿಯಾಗಿ ದೇಶವೇ ಅವನತಿಯತ್ತ ಸಾಗುತ್ತದೆ ಎಂದು ಬಿಜೆಪಿಯ ಸುರೇಶ್ ಕುಮಾರ್ ಅಭಿಪ್ರಾಯ ಪಟ್ಟರು.
ಡ್ರಗ್ ಮಾಫಿಯಾ ದಲ್ಲಿ ತೊಡಗಿರುವ ವಿದೇಶಿಯರನ್ನು ವಾಪಸ್ ಕಳಿಸುವ ಕೆಲಸ ಆಗಬೇಕು. ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾದರಿಯಲ್ಲೇ ರಾತ್ರಿ ವೇಳೆ ಡ್ರಗ್ ಟೆಸ್ಟ್ ಆಗಬೇಕು. ಹೊಸದಾಗಿ ಮದುವೆಯಾದ ಅನೇಕರು ಡ್ರಗ್ಸ್ ತೆಗೆದುಕೊಂಡ ಕಾರಣ ಡಿವೋರ್ಸ್ ಆಗಿರುವ ಘಟನೆಗಳೂ ಇವೆ. ರಾತ್ರಿಯಿಡೀ ತೆರೆದಿರುವ ಕಂಪನಿಗಳಲ್ಲೂ ಡ್ರಗ್ ಹಾವಳಿ ಇದೆ ಎಂದು ಸದನದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು.
ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಪ್ರದೇಶಗಳ ಶಾಲೆಗಳವರು ಯಾರೂ ಡ್ರಗ್ ವ್ಯಸನಿಗಳಾಗಲ್ಲ. ಯಾರು ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ, ಪ್ರತಿಷ್ಟಿತರ ಮಕ್ಕಳು ಇದ್ದಾರೋ, ಅಪ್ಪ ಅಮ್ಮನ ಬಿಟ್ಟಿ ದುಡ್ಡು ಸಿಕ್ಕಿತ್ತೋ ಅಂತಹವರು ಮಾತ್ರ ಡ್ರಗ್ ಗೆ ಬಲಿಯಾಗುತ್ತಿದ್ದಾರೆ. ಜತೆಗೆ ಯಾವ ರೈತರೂ ಬುದ್ದಿ ಪೂರ್ವಕವಾಗಿ ಗಾಂಜಾ ಅಫೀಮು ಬೆಳೆಯಲ್ಲ. ಯಾರು ಬುದ್ದಿಗೇಡಿಗಳೋ ಸಮಾಜದ ಮಾನ ಮರ್ಯಾದೆಗೆ ಅಂಜೋದಿಲ್ವೋ ಅಂತಹವರು ಮಾತ್ರ ಗಾಂಜಾ ಬೆಳೆಯುತ್ತಾರೆ ಎಂದರು.
ಡ್ರಗ್ ಮಾಫಿಯಾ ಕುರಿತು ಸದನದಲ್ಲಿ ಉತ್ತರ ನೀಡಿದ ಗೃಹಸಚಿವ ಜಿ.ಪರಮೇಶ್ವರ್, ಡ್ರಗ್ಸ್ ಸೇವನೆಗೆ ಶಾಸಕರು, ಸಚಿವರು, ಪ್ರತಿಷ್ಠಿತರು, ಶ್ರೀಮಂತರ ಮಕ್ಕಳು ಬಲಿಯಾಗಿದ್ದಾರೆ. ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚು. ಕರ್ನಾಟಕವನ್ನು ಪಂಜಾಬ್ ರೀತಿ ಆಗಲು ಬಿಡಲ್ಲ. ಡ್ರಗ್ಸ್ ಹಾವಳಿ ರಾಜ್ಯದಲ್ಲಿ ನಿಲ್ಲಬೇಕು. ಕಾನೂನು ಚೌಕಟ್ಟಿನಲ್ಲಿ ಡ್ರಗ್ಸ್ ಮಾಫಿಯಾ ನಿಲ್ಲಿಸಲು ಏನೇನು ಮಾಡಬಹುದೋ ಎಲ್ಲವನ್ನು ಮಾಡ್ತೇವೆ. ಪೊಲೀಸರಿಗೆ ತರಬೇತಿ ಕೊಡಲಾಗ್ತಿದೆ. ಡ್ರಗ್ಸ್ ಹಾವಳಿ ತಡೆಯುವ ಜವಾಬ್ದಾರಿಯನ್ನು ಇವರಿಗೆ ನೀಡಲಾಗಿದೆ. ಆದರೆ, ತರಬೇತಿಗೊಂಡ ಪೊಲೀಸರು ಡ್ರಗ್ಸ್ ದಂಧೆ ತಡೆಯುತ್ತಿದ್ದಾರಾ ಇಲ್ಲವಾ ಅಂತ ನೋಡಬೇಕಿದೆ. ಡ್ರಗ್ಸ್ ಮಾರಾಟಗಾರರನ್ನು ಹಿಡಿದಿದ್ದರೆ ನಿಮ್ಮ ವಿರುದ್ಧ ಕ್ರಮ ಎಂಬ ಎಚ್ಚರಿಕೆ ಪೊಲೀಸರಿಗೆ ಕೊಡಲಾಗಿದೆ. ಎಲ್ಲೆಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆಯೋ ಅಲ್ಲೆಲ್ಲ ಕಠಿಣ ಕ್ರಮಗಳ ಮೂಲಕ ತಡೆ ಹಾಕ್ತಿದ್ದೇವೆ.
ಡ್ರಗ್ಸ್ ದಂಧೆ ಹೊಸದಲ್ಲ. ನಮ್ಮ ಸಮಾಜದಲ್ಲಿ ಹಿಂದಿನಿಂದಲೂ ಇದ್ದೇ ಇದೆ.1985ರಲ್ಲೇ ನಾರ್ಕೋಟಿಕ್ ಡ್ರಗ್ ಪ್ರಿವೆನ್ಷನ್ ಕಾಯ್ದೆ ಮಾಡಲಾಗಿದೆ. ನಮ್ಮ ರಾಜ್ಯ ಇನ್ನೂ ಪಂಜಾಬ್ ಸ್ಥಿತಿಗೆ ತಲುಪಿಲ್ಲ. ಕರ್ನಾಟಕವನ್ನು ಪಂಜಾಬ್ ಸ್ಥಿತಿಗೆ ಆಗೋದಕ್ಕೆ ನಾವು ಬಿಡುವುದಿಲ್ಲ ಎಂದರು.
ಡ್ರಗ್ ಮಾಫಿಯಾ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಕೇಂದ್ರ ಸರಕಾರ ಕಠಿಣ ಕಾನೂನು ತರಬೇಕು. ಆಗ ಮಾತ್ರ ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಸಾಧ್ಯ ಎಂದರು.









