ಮೈಸೂರು: ಮುಖ್ಯಮಂತ್ರಿ ಆಗಿದ್ದ ವೇಳೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ನಮ್ಮ ಜನರಿಗೆ ಕೊಡಬಾರದ ಕಷ್ಟ ಕೊಟ್ಟಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಜಿ.ಟಿ ದೇವೇಗೌಡ ಶಕ್ತಿ ಪ್ರದರ್ಶನ ನಡೆಸಿದ್ರು.ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ಜಿಟಿ ದೇವೇಗೌಡ 36 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಚುನಾವಣೆ ವೇಳೆ ಪ್ರಚಾರಕ್ಕೆ ಚಾಲನೆ ನೀಡಿದ್ದ ಸ್ಥಳದಲ್ಲೇ ಕೃತಜ್ಞತಾ ಸಮಾವೇಶ ಏರ್ಪಡಿಸಿ ಇಂದು ಮತ್ತೆ ಶಕ್ತಿ ಪ್ರದರ್ಶನ ಮಾಡಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಟಿಡಿ, ನನಗೆ ಬಂದ ಮತಗಳ ಅಂತರದಿಂದ ಪ್ರಧಾನಿ ನರೇಂದ್ರ ಮೋದಿಯೇ ನಡುಗಿ ಹೋಗಿದ್ದಾರೆ. ಭಾರತದ ಭೂಪಟದಲ್ಲಿ ಈ ಚುನಾವಣೆಯನ್ನು ದಾಖಲಾಗುವಂತೆ ಮಾಡಿದ್ದೀರಿ. ಸಾರ್ವಜನಿಕ ಸೊಸೈಟಿಯಲ್ಲಿ ಅಕ್ಕಿ ತೂಕ ಮಾಡುತ್ತಿದ್ದ ನನ್ನನ್ನು ಈ ಸ್ಥಾನಕ್ಕೆ ತಂದಿದ್ದು ನೀವು. ಐದು ವರ್ಷ ಚಾಮುಂಡೇಶ್ವರಿ ಕ್ಷೇತ್ರದ ಜನ ಬಹಳ ಕಿರುಕುಳ ಅನುಭವಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಎನ್ನುವ ಕಾರಣಕ್ಕೆ ಅವರ ಬೆಂಬಲಿಗರು ನಮ್ಮ ಜನರಿಗೆ ಕೊಡಬಾರದ ಕಷ್ಟ ಕೊಟ್ಟಿದ್ದಾರೆ. ನಮ್ಮ ಜನರ ಮೇಲೆ ಇಲ್ಲ ಸಲ್ಲದ ಕೇಸ್ ದಾಖಲಿಸಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಡದವರು ಗುದ್ದಲಿ ಪೂಜೆ ಮಾಡಿದ್ದಾರೆ. ಇದೆಲ್ಲವನ್ನು ಸುಮ್ಮನೆ ಸಹಿಸಿದ್ದೇನೆ. ಕೆಲವೊಮ್ಮೆ ಮನೆಯಲ್ಲಿ ಕುಳಿತು ಕಣ್ಣೀರು ಹಾಕಿದ್ದೇನೆ ಎಂದ್ರು.









