ಮೈಸೂರು:ಸಂವಿಧಾನದ 371ನೇ ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೊಸ ವಿಶ್ವವಿದ್ಯಾಲಯ, ಕೌಶಲ್ಯ ತರಬೇತಿ ಕೇಂದ್ರ, ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸಲು ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಸಚಿವ ಜಿ.ಟಿ ದೇವೇಗೌಡ ಮನವಿ ಮಾಡಿದರು.
ಭಾರತ ಸರ್ಕಾರ ಆರಂಭಿಸಿರುವ ‘ಆದ್ಯತಾ ಜಿಲ್ಲೆಗಳ ಪರಿವರ್ತನೆ’ ಕಾರ್ಯಕ್ರಮದ ಅಂಗವಾಗಿ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಜೊತೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವಡೇಕರ್ ವೀಡಿಯೋ ಸಂವಾದ ನಡೆಸಿದರು.ಸಂವಾದದಲ್ಲಿ ಕರ್ನಾಟಕದ ವಿಷಯ ಬಂದಾಗ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬೇರೆ ರಾಜ್ಯಗಳ ಶಿಕ್ಷಣ ಸಚಿವರಂತೆ ತಾವೂ ಕೂಡ ಪರಿಚಯ ಮಾಡಿಕೊಳ್ಳಲು ಮುಂದಾದರು. ಆಗ ಕೇಂದ್ರ ಸಚಿವರೇ ಮಧ್ಯೆ ಪ್ರವೇಶಿಸಿ, ‘ನಿಮ್ಮ ಬಗ್ಗೆ ಗೊತ್ತು ಎನ್ನುತ್ತ ಹೊಸ ಸಚಿವರಿಗೆ ಸ್ವಾಗತ ಹಾಗೂ ಅಭಿನಂದನೆಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.
ನಂತರ ಸಂವಾದದಲ್ಲಿ ಮಾತನಾಡಿದ ಜಿ.ಟಿ ದೇವೇಗೌಡ ಕರ್ನಾಟಕದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಆದ್ಯತಾ ಜಿಲ್ಲೆಗಳಾಗಿ (Aspirational Districts) ಗುರುತಿಸಿದ್ದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಧನ್ಯವಾದಗಳನ್ನು ಹೇಳಿದರು.ರಾಯಚೂರು ಮತ್ತು ಯಾದಗಿರಿಯಲ್ಲಿ ಎರಡು ಹೊಸ ಮಾದರಿ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವತಿಯಿಂದ ಈ ಕಾಲೇಜುಗಳಿಗೆ ಡಿಜಿಟಲ್ ಚಾಲನೆ ನೀಡಲು ನಾವು ಸಿದ್ಧರಿದ್ದೇವೆ ಎಂದ್ರು.
ಇನ್ನೂ ಹೆಚ್ಚಿನ ಅನುದಾನ ನೀಡುವುದರ ಮೂಲಕ ಹೈದರಾಬಾದ್ ಕರ್ನಾಟಕ ಹಾಗೂ ಇತರೆ ಪ್ರದೇಶಗಳಲ್ಲಿ ಹಿಂದುಳಿದ ಕಾಲೇಜುಗಳಿಗೆ ಅನುಕೂಲ ಮಾಡಿಕೊಡಬೇಕು.ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ(RUSA) ಯೋಜನೆ ಅನುಷ್ಟಾನದಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ಬೆಂಬಲ ಹೀಗೇ ಇರಲಿ ಎಂದು ಸಚಿವರು ಕೋರಿದ್ರು.
ಭಾರತ ಸರ್ಕಾರವು ಆದ್ಯತಾ ಜಿಲ್ಲೆಗಳ ಪರಿವರ್ತನೆ(Transformation of Asptirational Districts) ಕಾರ್ಯಕ್ರಮದ ಅಡಿಯಲ್ಲಿ 28 ರಾಜ್ಯಗಳಿಂದ 117 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಈ ಯೋಜನೆ ಅನುಷ್ಟಾನಗೊಳಿಸುತ್ತಿದೆ. ಇತ್ತೀಚಿನ ಲಭ್ಯ ಮಾಹಿತಿಯನ್ನು ಸಂಗ್ರಹಿಸಿ, ನೀತಿ ಆಯೋಗವು 117 ಜಿಲ್ಲೆಗಳ ಬೇಸ್‍ಲೈನ್ ಮಾಡಿದೆ. ಈ 117 ಜಿಲ್ಲೆಗಳ ಪೈಕಿ ಪೈಕಿ ಕರ್ನಾಟಕದ ಎರಡು ಜಿಲ್ಲೆಗಳು ಆಯ್ಕೆಯಾಗಿದ್ದು, ರಾಯಚೂರು 12ನೇ ಸ್ಥಾನದಲ್ಲಿ ಹಾಗೂ ಯಾದಗಿರಿ 40ನೇ ಸ್ಥಾನದಲ್ಲಿವೆ ಎಂದ್ರು.
ಯಾದಗಿರಿ ಜಿಲ್ಲೆಯ ಶಹಾಪೂರದಲ್ಲಿ ಹಾಗು ರಾಯಚೂರು ತಾಲ್ಲೂಕಿನ ಸಿದ್ರಾಮಪುರದಲ್ಲಿ ತಲಾ ಒಂದೊಂದು ಹೊಸ ಸರ್ಕಾರಿ ಮಾದರಿ ಕಾಲೇಜನ್ನು 12 ಕೋಟಿ ರೂ.ಗಳನ್ನು ನೀಡಿ, ರೂಸಾ ಯೋಜನೆಯಡಿ ಮಂಜೂರು ಮಾಡಲಾಗಿದೆ.
ಇದಲ್ಲದೆ, ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ, ಸರ್ಕಾರಿ ಅನುದಾನಿತ ಕಾಲೇಜುಗಳಾದ ರಾಯಚೂರಿನ ತಾರಾನಾಥ್ ಶಿಕ್ಷಣ ಸಂಸ್ಥೆ ಲಕ್ಷ್ಮಿ ವೆಂಕಟೇಶ್ ದೇಸಾಯಿತಿ ಕಾಲೇಜು ಹಾಗೂ ಎಸ್‍ಎಸ್‍ಆರ್‍ಜಿ ಮಹಿಳಾ ಕಾಲೇಜಿಗೆ ಮೂಲಭೂತ ಸೌಕರ್ಯಕ್ಕಾಗಿ ತಲಾ 2 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದ್ರು.
ವೀಡಿಯೋ ಸಂವಾದಲ್ಲಿ ಮೈಸೂರಿನಿಂದ ಉನ್ನತ ಶಿಕ್ಷಣ ಸಚಿವರೊಂದಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಕೌನ್ಸಿಲ್‍ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್.ಎ. ಕೋರಿ, ಆಡಳಿತಾಧಿಕಾರಿ ತಾಂಡವಗೌಡ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ, ಉಪಸ್ಥಿತರಿದ್ದರು.ಬೆಂಗಳೂರು ಕೇಂದ್ರದಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎನ್.ಮಹೇಶ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ. ಜಾಫರ್ ಅವರು ಭಾಗವಹಿಸಿದ್ದರು.









