ಚೆನ್ನೈ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಸ್‌ಪಿಕೆ ಕಂಪನಿಗೆ ಸೇರಿದ 30ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಬರೋಬ್ಬರಿ 163 ಕೋಟಿ ರೂಪಾಯು ನಗದು ಮತ್ತು 101 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಗದು ಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಚೆನ್ನೈ ವಿಭಾಗ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ದಾಖಲೆಗಳ ಪರಿಶೀಲನೆ ವೇಳೆ ಹೆದ್ದಾರಿ ನಿರ್ಮಾಣ ಸಂಸ್ಥೆ ತೆರಿಗೆ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳಿಂದ ತಳಿದು ಬಂದಿದೆ. ಮದುರೆ, ವೆಲ್ಲೂರು ಸೇರಿದಂತೆ 30 ಸ್ಥಳಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ಶೋಧ ಕಾರ್ಯ ನಡೆದಿದೆ.
ಇದು ದೇಶವೇ ಕಂಡರಿಯದ ಅತೀ ದೊಡ್ಡ ಐಟಿ ರೈಡ್ ಆಗಿದ್ದು, ರಸ್ತೆ ಗುತ್ತಿಗೆದಾರನ ಮನೆಯೊಂದರಲ್ಲಿ 163 ಕೋಟಿ ನಗದು ಸಿಕ್ಕಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ದಾಳಿ ವೇಳೆ 101 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.
2016 ರಲ್ಲಿ 110 ಕೋಟಿ ವಶ ಪಡಿಸಿಕೊಳ್ಳುವ ಮೂಲಕ ಐಟಿ ಇಲಾಖೆ ದಾಖಲೆ ಬರೆದಿತ್ತು. ಆದರೆ ಈಗ ಅದನ್ನೂ ಮೀರಿಸಿದ ಸಂಪತ್ತು ವಶ ಪಡಿಸಿಕೊಂಡಿದೆ.









