ನವದೆಹಲಿ: ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಿರುವ ಸಭೆಗೆ ಸಂಬಂಧಿಸಿದ ದಾಖಲೆಗಳ ಜೊತೆ ಸಂಸದರಿಗೆ ಆ್ಯಪಲ್ ಐಫೋನ್ ಕಳಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಾವೇರಿ ವಿಚಾರ ಹಾಗೂ ರಾಜ್ಯದ ಇತರೆ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಇಂದು ನವದೆಹಲಿಯಲ್ಲಿ ಸಿಎಂ ಕುಮಾರಸ್ವಾಮಿ ರಾಜ್ಯದ ಸಂಸದರ ಸಭೆ ಕರೆದಿದ್ದರು. ಸಭೆಗೆ ಸಂಬಂಧಿಸಿದ ದಾಖಲೆಗಳನ್ನು ಎಲ್ಲಾ ಸಂಸದರಿಗೆ ಸಿಎಂ ಕಛೇರಿ ರವಾನಿಸಿತ್ತು. ಆದರೆ ದಾಖಲೆಗಳ ಜೊತೆ ಆ್ಯಪಲ್ ಐಫೋನ್ ಕೂಡ ಕಳುಹಿಸಲಾಗಿದೆ ಎಂಬುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ತಾವು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆಸಿದ್ದೀರಾ. ಆದರೆ, ತಮ್ಮ ಸರ್ಕಾರ ನಮಗೆ ಕಳುಹಿಸಿರುವ ಕಡತಗಳ ಜೊತೆಗೆ ದುಬಾರಿ ಬೆಲೆಯ ಐಫೋನ್ ಸಹ ಕಳುಹಿಸಿದೆ. ಈ ಐಫೋನ್ ತೆಗೆದುಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ.
ವಿವಾದ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿ, ಐಫೋನ್ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.









