ಬೆಂಗಳೂರು : ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ- ಎಂಇಪಿ ರಾಜ್ಯ ಕಚೇರಿಯನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸ್ವಯಂ ಘೋಷಿತ ಮುಖಂಡ ಕೃಷ್ಣೇಗೌಡ ಸುಮಾರು 4 ಕೋಟಿ ರೂಪಾಯಿಗಳಿಗಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಪಕ್ಷದ ರಾಜ್ಯ ವಕ್ತಾರ ಸಿರಾಜ್ ಜಾಫ್ರಿ ಹಾಗೂ ರಾಜ್ಯ ಯುವ ಘಟಕದ ಆಧ್ಯಕ್ಷ ಡಾ.ಎಂ.ಕೆ.ಪಾಶ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಿನಗಳಿಂದ ಕೃಷ್ಣೇಗೌಡ ಪಕ್ಷದ ಹೆಸರಿಗೆ ಮಸಿಬಳಿಯಲು ಮಾಡುತ್ತಿರುವ ಷಡ್ಯಂತರವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಪಕ್ಷದ ಪ್ರಚಾರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಗುರು ಖಾಜಾ ಅವರಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ಸುಮಾರು ನಾಲ್ಕು ಕೋಟಿ ರೂಪಾಯಷ್ಟು ಭಾರಿ ಮೊತ್ತಕ್ಕೆ ಕೃಷ್ಞೇಗೌಡ ಬೇಡಿಕೆ ಇಟ್ಟಿರುವ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಗಳನ್ನು ಒಳಗೊಂಡ ದಾಖಲೆಯನ್ನು ಈ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.
ಕೃಷ್ಣೇಗೌಡ ಪಕ್ಷದ ಅಭ್ಯರ್ಥಿಗಳ ಪೈಕಿ ಕೆಲವರನ್ನು ಎತ್ತಿ ಕಟ್ಟಿ ಬೆಂಗಳೂರಿನ ಶಿವಾಜಿ ನಗರದ ಇನ್ ಫೆಂಟ್ರಿ ರಸ್ತೆಯ ಜೆಮ್ ಪ್ಲಾಜಾದಲ್ಲಿರುವ ಕಚೇರಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಕಚೇರಿ ಸಿಬ್ಬಂದಿಗಳನ್ನು ಬೆದರಿಸಿ ಹೊರಗೆ ಅಟ್ಟಿದ್ದರು. ಕೃಷ್ಞೇಗೌಡನೊಂದಿಗೆ ಕೈಜೋಡಿಸಿ ಚುನಾವಣಾ ವೆಚ್ಚದ ಹಣಕ್ಕಾಗಿ ಒತ್ತಾಯಿಸುತ್ತಿದ್ದರು.
ಇದೇ ವೇಳೆ, ಪಕ್ಷದ ಕಚೇರಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಕೆಲವರು, ತಮಗೆ ದೂರವಾಣಿ ಮೂಲಕ ಕರೆ ಮಾಡಿ ಅಶ್ಲೀಲ ಪದಗಳಿಂದ ವಾಚಾಮಾಗೋಚರವಾಗಿ ನಿಂದಿಸಿ, ಮಾನಹಾನಿಯನ್ನುಂಟು ಮಾಡಿದ್ದರು. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ತಾವು ಎಫ್ ಐಆರ್ ದಾಖಲಿಸಿರುವುದಾಗಿ ಡಾ.ಪಾಶ ತಿಳಿಸಿದರು.
ಪಕ್ಷ ಯಾರಿಗೂ ಮೋಸ ಮಾಡಿಲ್ಲ
ಇದೇ ವೇಳೆ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿ.ಫಾರಂ ನೀಡುವಾಗ ಪಕ್ಷದ ಕೆಲ ಅಭ್ಯರ್ಥಿಗಳು ತಮ್ಮ ಇತಿಮಿತಿಯಲ್ಲಿ ತಮ್ಮ ಕೈಲಾದಷ್ಟು ದೇಣಿಗೆಯನ್ನು ಚೆಕ್ ರೂಪದಲ್ಲಿ ನೀಡಿದ್ದರು. ಅದನ್ನು ಪಕ್ಷ ಅವರಿಗೆ ವಾಪಸ್ ಕೊಟ್ಟಿದೆ. ಆದರೂ ಕೆಲವರು ದುರುದ್ದೇಶಪೂರ್ವಕವಾಗಿ ಪಕ್ಷದ ವಿರುದ್ಧ ವಂಚನೆ ಆರೋಪಹೊರೆಸಿ ಸುಳ್ಳು ಮೊಕದ್ದಮೆ ಹೂಡಿದ್ದಾರೆ ಎಂದು ಪಕ್ಷದ ರಾಜ್ಯ ವಕ್ತಾರ ಸಿರಾಜ್ ಜಾಫ್ರಿ ಹೇಳಿದ್ದರು. ಪಕ್ಷ ಯಾರಿಂದಲೂ ಬಲವಂತವಾಗಿ ಚೆಕ್ ಪಡೆದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪಕ್ಷದ ಕಚೇರಿಯಲ್ಲಿ ಅಕ್ರಮವಾಗಿ ಇನ್ನೂ ಬೀಡುಬಿಟ್ಟಿರುವ ಕೆಲ ಅಭ್ಯರ್ಥಿಗಳು ಕಚೇರಿಯಿಂದ ಹೊರಗೆ ಬರಲು ಸಿದ್ಧವಾಗಿದ್ದರೂ, ಕೃಷ್ಞೇಗೌಡ ಮತ್ತು ಪಠಾಲಂ ಅವರನ್ನು ಹೆದರಿಸಿ-ಬೆದರಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಾ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ತಾಳ್ಮೆಗೂ ಇತಿ-ಮಿತಿ ಇದೆ. ನಾವು ಇನ್ನು ಮುಂದೆ ಸುಮ್ಮನಿರುವುದಿಲ್ಲ ಹಣಕ್ಕಾಗಿ ಬ್ಲಾಕ್ ಮೇಲ್ ಮತ್ತು ಬೆದರಿಕೆ ತಂತ್ರಕ್ಕೆ ಇಳಿದಿರುವ ಕೃಷ್ಣೇಗೌಡ ಮತ್ತು ಪಠಾಲಂನ ಕಾನೂನು ಬಾಹಿರ ಕೆಲಸಗಳನ್ನು ಬಹಿರಂಗಪಡಿಸಿ ಅವರ ವಿರುದ್ದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಿ ತೀವ್ರ ಹೋರಾಟ ಮುಂದುವರಿಸುತ್ತೇವೆ ಎಂದು ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಕನ್ನಡ ರಕ್ಷಣ ವೇದಿಕೆ ಹೆಸರಿನಲ್ಲಿ ಒಬ್ಬ ಹೆಣ್ಣುಮಗಳ ವಿರುದ್ದ ತೊಡೆತಟ್ಟಿ, ಸಮರ ಸಾರಿ ಅವರಿಗೆ ಮಾನಸಿಕ ಹಿಂಸೆ ಕೊಡುತ್ತಿರುವುದು ಖಂಡನೀಯ, ಬದಲಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೃಷ್ನೇಗೌಡ ಹೋರಾಟ ಮಾಡಲಿ, ನಾವು ಅದಕ್ಕ ಸಾಥ್ ಕೊಡುತ್ತೇವೆ, ನಾವು ಕನ್ನಡಿಗರೇ ರಾಜಕೀಯದಲ್ಲಿ ಉದಯವಾಗುತ್ತಿರುವ ಹೊಸ ಪಕ್ಷ ಕತ್ತನ್ನು ಹಿಸುಕಿ ಎಂಇಪಿ ಬೆಳೆಯಲು ಬಿಡುವುದಿಲ್ಲ, ನಾಶ ಮಾಡುತ್ತೇವೆ ಎಂದು ಧಮ್ಕಿ ಹಾಕಲು ಅವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ದಲಿತ ಸಂಘಟನೆಯ ಮಹಿಳಾ ಅಧ್ಯಕ್ಷೆ ಪುಷ್ಫಲತಾ, ಅಂಬೇಡ್ಕರ್ ದಲಿತ ಸೇನಾ ನಾಯಕಿ ಶಶಿಕಲಾ, ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ, ಲೀಲು ಸನಾ, ಮುಖಂಡರಾದ ಜಿಲಾನಿ ಫಾತೀಮಾ, ಶರೀಫ್ ಮತ್ತಿತರರು ಹಾಜರಿದ್ದರು.









