ಮಡಿಕೇರಿ: 19 ವರ್ಷಗಳ ಬಳಿಕ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ನಾಡಿನ ಜೀವನದಿ ಉಗಮಸ್ಥಾನಕ್ಕೆ ನಾಡಿನ ದೊರೆ ಪೂಜೆ ಸಲ್ಲಿಸಲು ಎರಡು ದಶಕವೇ ಬೇಕಾಯಿತು.
ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎನ್ನುವ ನಂಬಿಕೆ ಹಿನ್ನಲೆಯಲ್ಲಿಯೂ
ಮುಖ್ಯಮಂತ್ರಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಜತೆಗೆ ಪೂಜೆ ಸಲ್ಲಿಸಿದರು. ಈ ಹಿಂದೆ ಜೆ.ಎಚ್. ಪಟೇಲರು ತಲಕಾವೇರಿಗೆ ಬಂದು ಹೋದ ನಂತರ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರು. ಅಂದಿನಿಂದ ಯಾವ ಮುಖ್ಯಮಂತ್ರಿಗಳು ತಲಕಾವೇರಿಗೆ ಆಗಮಿಸಿ ಪೂಜೆ ಮಾಡಿರಲಿಲ್ಲ.ಆದರೆ ಇಂದು ಕುಮಾರಸ್ವಾಮಿ ಈ ಕಟ್ಟುಪಾಡು ಮುರಿದು ತಲಕಾವೇರಿಗೆ ಪೂಜೆ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇಂಥ ಮೌಢ್ಯದ ಬಗ್ಗೆ ನನಗೆ ನಂಬಿಕೆ ಇಲ್ಲ. ದೇವರು ಕೊಟ್ಟಿರುವ ಅಧಿಕಾರವನ್ನು ದೇವರೇ ಕಾಪಾಡುತ್ತಾನೆ. ನಾನು ಮೊದಲಿನಿಂದಲೂ ಯಾವುದೇ ಮೂಢನಂಬಿಕೆ ಆಚರಿಸಿಕೊಂಡು ಬಂದಿಲ್ಲ. ಇದು ಒಂದು ವಿಶ್ವಾಸ ಅಷ್ಟೇ. ಕಾಕತಾಳಿಯವನ್ನೇ ನಿಜವೆಂದು ಭಾವಿಸಬಾರದು. ದೇವರ ಅನುಗ್ರಹದಲ್ಲಿ ನಾವಿರಬೇಕು, ಮೂಢ ನಂಬಿಕೆಗಳು ನಾವು ಸೃಷ್ಟಿ ಮಾಡಿಕೊಂಡಿರುವುದು ಎಂದು ಸ್ಪಷ್ಟಪಡಿಸಿದರು.









