ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ವಿಧೇಯಕವನ್ನು ವಿರೋಧಿಸಿ ದೇಶದಾದ್ಯಂತ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘಟನೆ ಕರೆ ನೀಡಿದೆ. ದೇಶದಾದ್ಯಂತ 2.15 ಲಕ್ಷ ವೈದ್ಯರು ಇಂದು ಕೆಲಸಕ್ಕೆ ಗೈರಾಗಿ ಹೋರಾಟ ನಡೆಸಲಿದ್ದಾರೆ.
ಐಎಂಎ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ, ರೋಗಿಗಳಿಗೆ ಅಗತ್ಯ ಸೇವೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್ಲ ರಾಜ್ಯಗಳ ವೈದ್ಯಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲೂ ಮುಷ್ಕರದ ಅಂಗವಾಗಿ ಖಾಸಗಿ ವೈದ್ಯರು ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಒಪಿಡಿ ಬಂದ್ ಮಾಡಿ ಹೋರಾಟ ಮಾಡಲಿದ್ದಾರೆ. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಖಾಸಗಿ ವೈದ್ಯರ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆಯಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ವೈದ್ಯರಿಗೆ ರಜೆ ನೀಡಿಲ್ಲ. ಹೊರ ರೋಗಿಗಳ ವಿಭಾಗ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಸಂಜೆ 6 ಗಂಟೆ ಬಳಿಕ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಒಪಿಡಿ ಸೇವೆ ಸಿಗಲಿದೆ.









