ಅಧಿಕಾರಿಗಳ ಮೈ ಮುಟ್ಟಿದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ: ಹೈಕೋರ್ಟ್ ಕಡಕ್ ಎಚ್ಚರಿಕೆ

0
45

ಬೆಂಗಳೂರು: ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಯಾರಾದರೂ ಅಧಿಕಾರಿಗಳ ಮೈ ಮುಟ್ಟಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ಕೋರ್ಟ್ ಗೆ ಕರೆಸಿಕೊಂಡ ಮುಖ್ಯ ನ್ಯಾಯಮೂರ್ತಿಗಳು, ಮೊದಲು ಬೆಂಗಳೂರಿನಲ್ಲಿರುವ ಎಲ್ಲ ರೀತಿಯ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ತೆರವುಗೊಳ್ಳಬೇಕು. ಅದು ಯಾರದ್ದೇ ಆಗಿರಲಿ. ಮುಲಾಜಿಲ್ಲದೇ ಅವುಗಳನ್ನ ತೆಗೆದು ಹಾಕಬೇಕು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕೋರ್ಟ್‌ನಲ್ಲಿ ಇಂದು ಏನೆಲ್ಲಾ ನಡೆಯಿತು ಅದರ ಫುಲ್ ಡಿಟೈಲ್ಸ್ ಇಲ್ಲಿದೆ……

* ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೀರಾ ಎಂದು ರಾಜ್ಯ ಪ್ರಾಸಿಕ್ಯೂಟರ್ ಎಚ್.ಎಸ್. ಚಂದ್ರಮೌಳಿ, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್‌ಗೆ ಸಿಜೆ ಪ್ರಶ್ನಿಸಿದರು.

* ತನಿಖೆ ಮುಗಿಸಿ ನಾಳೆಯೇ ಚಾರ್ಜ್‌ಶೀಟ್ ಸಲ್ಲಿಸಿ. ಹಲ್ಲೆ ಮಾಡಿದವರು ಕಾನೂನು, ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ. ಆರೋಪಿಗಳೇನಾದರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆಯೇ? ಇವರ ವಿರುದ್ಧ ಸಮಾಜದ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸಿ ಅವರಿಗೆ ತಕ್ಕ ಪಾಠ ಕಲಿಸಿ ಎಂದು ಸಿಜೆ ಸೂಚನೆ ನೀಡಿದರು.

* ಹಲ್ಲೆ ಮಾಡಿರುವುದು ವ್ಯವಸ್ಥೆ ‌ಮೇಲೆ. ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ ಎಂದರೆ ಅದು ಸಂಪೂರ್ಣ ವ್ಯವಸ್ಥೆ ವೈಫಲ್ಯ. ಸರ್ಕಾರಿ ಅಧಿಕಾರಿಗಳ ಮೈಮುಟ್ಟವುದು ಎಂದರೆ ಏನೆಂದುಕೊಂಡಿದ್ದಾರೆ? ಇಂಥವರಿಗೆಲ್ಲ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ. ಪೊಲೀಸರು ಯಾವುದೇ ಕಾರಣಕ್ಕೂ ಹಿಂಜರಿಯದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಆರೋಪಿಗಳ ಜಾಮೀನು ಅರ್ಜಿಯನ್ನು ಸಂಬಂಧಿಸಿದ ರೋಸ್ಟರ್ ಬೆಂಚ್‌ಗಳು ವಿಶೇಷ ನಿಗಾವಹಿಸಿ, ಅಪರೂಪದ ಪ್ರಕರಣಗಳೆಂದು ಪರಿಗಣಿಸಿ ವಿಚಾರಣೆ ನಡೆಸುತ್ತವೆ. ಅಗತ್ಯ ಬಿದ್ದರೆ ಈ ಪ್ರಕರಣಗಳ ವಿಚಾರಣೆಗೆ ವಿಶೇಷ ಮ್ಯಾಜಿಸ್ಟ್ರೇಟ್ ನೇಮಕ ಮಾಡುತ್ತೇನೆ. ಶೀಘ್ರ ಅವುಗಳ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಸರಿಯಾದ ಜಾಗಕ್ಕೆ ಕಳಿಸುತ್ತೇವೆ ಎಂದರು.

* ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದೆಂದರೆ ಅದು ಬಹು ದೊಡ್ಡ ಅಪರಾಧ. ಇದೊಂದು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಒಳಪಡುವ ವಿಚಾರವೂ ಆಗುತ್ತದೆ. ಕೋರ್ಟ್ ಈ ಪ್ರವೃತ್ತಿಯ ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅಧಿಕಾರಿಗಳಿಗೆ ತಮ್ಮ ಕೆಲಸ ಏನೆಂದು ಗೊತ್ತಿರಬೇಕು. ಒಂದು ವೇಳೆ ಗೊತ್ತಿಲ್ಲದೆ ಹೋದರೆ ಹೇಗೆ ಗೊತ್ತು ಮಾಡಿಕೊಳ್ಳುವುದು ಎಂದು ನಾವು ತೋರಿಸುತ್ತೇವೆ.

* ಫ್ಲೆಕ್ಸ್ ಹಾಕುವವರಲ್ಲಿ ಕ್ರಿಮಿನಲ್ ಮನೋಭಾವದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಈ ರೀತಿಯ ಅಪರಾಧಕ್ಕೆ ಯಾರಾದರೂ ಕುಮ್ಮಕ್ಕು ನೀಡುತ್ತಿರಬಹುದೇ? ಹಾಗೇನಾದರೂ ಇದ್ದರೆ ನಾನದನ್ನು ಸ್ವಲ್ಪವೂ ಸಹಿಸುವುದಿಲ್ಲ. ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಪ್ರವೃತ್ತಿ ಕೊನೆಗೊಳ್ಳಬೇಕು. ಇನ್ನುಮುಂದೆ ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಣ್ಣಿಗೆ ಬಿದ್ದರೂ ಸಹಿಸುವುದಿಲ್ಲ. ಈ ದಿಸೆಯಲ್ಲಿ ಪೊಲೀಸರು ಹಾಗೂ ಬಿಬಿಎಂಪಿ 24×7 ಕೆಲಸ ಮಾಡಬೇಕು.

* ಈಗಾಗಲೇ ಗಸ್ತು ತಿರುಗುತ್ತಿರುವ ಪೊಲೀಸ್ ಕಾರ್ಯಪಡೆಗಳು ಫ್ಲೆಕ್ಸ್ ಹಾಕುವವರ ಬಗ್ಗೆ ನಿಗಾವಹಿಸಬೇಕು. ಸಿಸಿಟಿವಿ ಕ್ಯಾಮರಾಗಳಲ್ಲಿ ಈ ರೀತಿಯ ಚಟುವಟಿಕೆಗಳನ್ನು ಪರಿಶೀಲಿಸಿ, ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

* ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಅಥವಾ ಶಾಶ್ವತವಾಗಿ ಉಳಿಸಿಕೊಳ್ಳುವಂಥ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಪೊಲೀಸರು ಗಮನ ಹರಿಸಬೇಕು.

* ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಂಡು ಬಂದರೆ ಅದರ ಉತ್ತರದಾಯಿ ಪೊಲೀಸ್ ಆಯುಕ್ತರೇ ಆಗಿರುತ್ತಾರೆ.

* ಫ್ಲೆಕ್ಸ್ ತೆರವಿಗೆ ಮುಂದಾಗದ ಗುತ್ತಿಗೆದಾರರನ್ನು ಇಟ್ಟುಕೊಳ್ಳಬೇಡಿ. ಕೆಲಸ ಮಾಡುವ ಗುತ್ತಿಗೆದಾರರು ಸಾಕಷ್ಟಿದ್ದಾರೆ.

* ಬೆಂಗಳೂರಿನಲ್ಲಿ ಬಹಳಷ್ಟು ಸಮಸ್ಯೆಗಳಿಗೆ. ಅವುಗಳನ್ನು ಮೂಲದಿಂದಲೇ ಬಗೆ ಹರಿಸಬೇಕು. ಆ ದಿಸೆಯಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಕಾರ್ಯಾಚರಣೆ ಆರಂಭಿಕ ಹೆಜ್ಜೆ. ನಾವು ಬೆಂಗಳೂರಿನ ಸೌಂದರ್ಯ ಮರುಕಳಿಸುವ ಪ್ರಕ್ರಿಯೆಗೆ ಬದ್ಧವಾಗಿದ್ದೇವೆ.

* ಬೆಂಗಳೂರು ಶಿಸ್ತಿನ ನಗರ. ಇಲ್ಲಿ ಪುಂಡಾಟಿಕೆ, ಗೂಂಡಾಗಿರಿ, ಕ್ರಿಮಿನಲ್ ಪ್ರವೃತ್ತಿಗೆ ಜಾಗವಿಲ್ಲ. ಅಧಿಕಾರಿಗಳಿಗೆ ಭದ್ರತೆ ಕೊಡಿ, ಕಟ್ಟೆಚ್ಚರ ವಹಿಸಿ. ಈ ಬಗ್ಗೆ ಪೊಲೀಸ್ ಆಯುಕ್ತರೇ ಪ್ರಮಾಣಪತ್ರ ಸಲ್ಲಿಸಲಿ ಆ.7 ರಂದು ತನಿಖೆಯ ಫಲಿತಾಂಶವೇನು ತಿಳಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಲಾಗಿದೆ‌

- Call for authors -

LEAVE A REPLY

Please enter your comment!
Please enter your name here