ಬೆಂಗಳೂರು: ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ರೈಲ್ವೆ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕೊಲ್ಲಾಪುರದಿಂದ ಬೆಂಗಳೂರಿಗೆ ಆಗಮಿಸುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ 6.30ಕ್ಕೆ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ, ಕೊಲ್ಹಾಪುರದಿಂದ ಹೊರಟ ಈ ಟ್ರೈನ್ ಬೆಳಗಾವಿ ದಾಟಿದ ಬಳಿಕ ಧಾರವಾಡಕ್ಕೂ ಮುಂಚೆ ಬರುವ ಕಂಬಾರ ಗಣವಿ ನಿಲ್ದಾಣದಲ್ಲಿ ನಿಂತು ಬಿಟ್ಟಿತ್ತು. ಸುಮಾರು 9 ಗಂಟೆ ಹೊತ್ತಿಗೆ ಟ್ರೈನ್‍ನ ಎಲ್ಲ ಬೋಗಿಗಳನ್ನು ಕಂಬಾರ ಗಣವಿ ನಿಲ್ದಾಣದಲ್ಲಿ ಬಿಟ್ಟು ಇಂಜಿನ್‌ನ್ನು ಮಾತ್ರ ತೆಗೆದುಕೊಂಡು ಹೋಗಿ ಮುಂದಿನ ಮಾರ್ಗದಲ್ಲಿ ಕೆಟ್ಟು ನಿಂತಿದ್ದ ಗೂಡ್ಸ್ ಟ್ರೇನ್ ತೆರವುಗೊಳಿಸಲು ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ನ ಇಂಜಿನ್ ಬಳಸಿದ್ರು.
ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಇಂಜಿನ್, ಗೂಡ್ಸ್ ರೈಲನ್ನು ಧಾರವಾಡಕ್ಕೆ ತಲುಪಿಸಿ ಮರಳಿ ಬೋಗಿಗೆ ಬಂದು ಸೇರಿದ್ದು, ನಸುಕಿನ ಜಾವ 2 ಗಂಟೆಗೆ. ಅಲ್ಲಿಯವರೆಗೂ ಯಾವುದೇ ಸರಿಯಾದ ವ್ಯವಸ್ಥೆಯೂ ಇಲ್ಲದ ಕಂಬಾರಗಣವಿಯ ಪುಟ್ಟ ನಿಲ್ದಾಣದಲ್ಲಿಯೇ ಪ್ರಯಾಣಿಕರು ಪರದಾಡಬೇಕಾಯಿತು.
ಬೆಳಗ್ಗೆ 6.30 ಕ್ಕೆ ಬೆಂಗಳೂರಿಗೆ ತಲುಪಬೇಕಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಸುಮಾರು ಇನ್ನೂ ಕೂಡ ಬೆಂಗಳೂರು ತಲುಪಿಲ್ಲ. ಸುಮಾರು 1 ಗಂಟೆಗೆ ರೈಲು ಬೆಂಗಳೂರು ತಲುಪುವ ಸಾಧ್ಯತೆ ಇದೆ.
ಬೆಳಗಾವಿ ಹಾಗೂ ಧಾರವಾಡ ಭಾಗದಿಂದ ಬೆಂಗಳೂರಿಗೆ ಡಿ.ಆರ್ ಪರೀಕ್ಷೆ ಬರೆಯಲು ಇದೇ ರೈಲಿನಲ್ಲಿ ಬರುತ್ತಿದ್ದ ಸಾವಿರಾರೂ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಲಾಗದೇ ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ, ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಬೆಂಗಳೂರು ತಲುಪಿದ ಕಾರಣ ರೈಲ್ವೆ ಪರೀಕ್ಷೆ ಬರೆಯಲು ಆಗದವರಿಗೆ ಮರುಪರೀಕ್ಷೆಗೆ ಅನುವು ಮಾಡಿಕೊಡುತ್ತೇನೆ. ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೂ ಅವಕಾಶ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆಗಳಾಗದಂತೆ ನಿಗಾ ವಹಿಸಲು ರೈಲ್ವೆ ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.









