ಬೆಂಗಳೂರು: ನೀರು ಕೊಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಒತ್ತಾಯಿಸಿ ಮಹಾದಾಯಿ ಹೋರಾಟಗಾರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದೆ.ನಗರದ ಫ್ರೀಡಂ ಪಾರ್ಕನಲ್ಲಿ ಮಹಾದಾಯಿ ಹೋರಾಟಗಾರ ವೀರೇಶ ಸೊರಬದಮಠ ನೇತೃತದ ರೈತರ ತಂಡ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.
ಮಹದಾಯಿ ಹೋರಾಟಗಾರರ ಧರಣಿಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಬೆಂಬಲ ನೀಡಿ ಸ್ವತಃ ಧರಣಿಯಲ್ಲಿ ಪಾಲ್ಗೊಂಡ್ರು.ನೀರು ಕೊಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ ಎನ್ನುವ ಬೇಡಿಕೆಯಂತೆ ದಯಾಮರಣ ಕೋರುವ ಪತ್ರಕ್ಕೆ ಸಹಿ ಹಾಕಿದ್ರು.
ಈ ವೇಳೆ ಮಾತನಾಡಿದ ಎಚ್.ಎಸ್.ದೊರೆಸ್ವಾಮಿ,
ಮಹಾದಾಯಿ ವಿಷಯದಲ್ಲಿ ಇದುವರೆಗೆ ರಾಜ್ಯಕ್ಕೆ ನ್ಯಾಯ ಸಿಗದೆ ಇರುವುದಕ್ಕೆ ಬಿಜೆಪಿಯವರ ಮಲತಾಯಿ ಧೋರಣೆಯೇ ಕಾರಣ ಎಂದು ಆರೋಪಿಸಿದ್ರು.ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಿದ್ದಿದ್ದರೆ ಮಹಾದಾಯಿ ವಿವಾದ ಯಾವಾಗಲೋ ಇತ್ಯರ್ಥವಾಗುತ್ತಿತ್ತು.ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರಲಿಲ್ಲ.ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಮಹಾದಾಯಿ ವಿವಾದ ಇತ್ಯರ್ಥ ಮಾಡದೆ ಕೇಂದ್ರ ಸರ್ಕಾರದ ಬಿಜೆಪಿ ಪ್ರಮುಖರು ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ರು.
ಸಾ.ರಾ.ಗೋವಿಂದು ಮಾತನಾಡಿ ಕೇಂದ್ರ ಸರಕಾರದ ನಡೆಯನ್ನು ಟೀಕಿಸಿದ್ರು.ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಸರಿಯಲ್ಲ ಸರಕಾರದ ಧೋರಣೆಯಿಂದ ಹೋರಾಟಗಾರರು ದಯಾಮರಣ ಪತ್ರಕ್ಕೆ ಸಹಿ ಚಳವಳಿ ಆರಂಭಿಸುವಂತಾಗಿದೆ, ಹೋರಾಟಕ್ಕೆ ಚಿತ್ರರಂಗದ ಸಂಪೂರ್ಣ ಬೆಂಬಲ ಇದೆ.ಹಿಂದೆಯೂ ಬೆಂಬಲ ನೀಡಿದ್ವಿ ಈಗಲೂ ನೀಡುತ್ತೇವೆ,ಮುಂದೆಯೂ ನೀಡಲಿದ್ದೇವೆ ಎಂದ್ರು.
ಹೋರಾಟಗಾರ ವೀರೇಶ್ ಸೊರಬದಮಠ ಮಾತನಾಡಿ,ಇದೇ 21 ರಂದು ತೀರ್ಪು ಬರಲಿದೆ.ಅಲ್ಲಿಯವರೆಗೂ ನಾವು ಧರಣಿ ಮಾಡುತ್ತೇವೆ, ನೀರು ಸಿಗಬೇಕು ಇಲ್ಲವೇ ದಯಾಮರಣ ಪತ್ರಕ್ಕೆ ಅನುಮತಿ ನೀಡಬೇಕು ಈ ಎರಡೇ ಆಯ್ಕೆ ಕೇಂದ್ರ ಸರಕಾರಕ್ಕೆ ನೀಡುತ್ತಿದ್ದೇವೆ ಎಂದು ಹೋರಾಡ ತೀವ್ರಗೊಳಿಸುವ ಸೂಚನೆ ನೀಡಿದ್ರು.









