ಕೊಡಗು:ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.
ಕೊಡಗು ಜಿಲ್ಲಾಡಳಿತವು ರಕ್ಷಣೆ ಹಾಗೂ ಪರಿಹಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸೇನಾ ಸಿಬ್ಬಂದಿ, ಎನ್.ಡಿ.ಆರ್.ಎಫ್. ಮತ್ತಿತರ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು ಈವರೆಗೆ 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿಯವರು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದರು.
ರಾಷ್ಟ್ರಪತಿಗಳು ಕರೆಮಾಡಿ ತೋರಿದ ಕಾಳಜಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದರು.
ಈ ನಡುವೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೊಡಗಿನಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು.ಇಂದು ಅವರು ಮೈಸೂರು ವಿಮಾನ ನಿಲ್ದಾಣದಿಂದ ಹೊರಟು ಸೋಮವಾರಪೇಟೆ, ಶುಂಠಿ ಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ, ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳ ಸಮೀಕ್ಷೆ ನಡೆಸಿದರು.ನಂತರ ಪಿರಿಯಾಪಟ್ಟಣ ಹೆಲಿಪ್ಯಾಡ್ನಲ್ಲಿ ಇಳಿದು ಮಡಿಕೇರಿಗೆ ತೆರಳಿದರು.
ಮಾರ್ಗಮಧ್ಯದಲ್ಲಿ ಮಳೆಹಾನಿಗೆ ಒಳಗಾದ ಕೆಲವು ಸ್ಥಳ ಪರಿಶೀಲನೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.








