ಕಾವೇರಿ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ದ: ಕಮಲ್ ಹಾಸನ್

0
13

 

ಬೆಂಗಳೂರು: ಕಾವೇರಿ ನದಿ ವಿವಾದವನ್ನು ಪರಿಹರಿಸಿಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ದನಿದ್ದೇನೆ ಎಂದು ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸಿರುವ ಬಹುಭಾಷಾ ನಟ ಕಮಲ್ ಹಾಸನ್ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾಗೆ ನಟ ಕಮಲ್ ಹಾಸನ್ ಭೇಟಿ ನೀಡಿದರು.ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿದರು.ಕುರುವೈ ಬೆಳೆಗೆ ನೀರು ಹರಿಸುವಂತೆ ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್,ಕಾವೇರಿ ನದಿ ನಾವು ಹುಟ್ಟುವ ಮೊದಲೇ ಇತ್ತು. ಆದರೆ ಆ ನೀರಿನ ಮೇಲೆ ಹಕ್ಕ ಸಾಧಿಸಲು ನಾವು ಕಚ್ಚಾಡಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ಎರಡೂ ರಾಜ್ಯಗಳ ರೈತರೇ ಬಗೆಹರಿಸಿಕೊಳ್ಳಬೇಕಿತ್ತು. ನಮ್ಮ ಕೊನೆಯ ಆಯ್ಕೆ ಕೋರ್ಟ್ ಆಗಬೇಕಿತ್ತು. ಆದರೆ ಈಗಾಗಲೇ ಪ್ರಕರಣ ಕೋರ್ಟ್ ನಲ್ಲಿದೆ.ಆದರೂ ಕಾವೇರಿ ವಿವಾದ ಇತ್ಯರ್ಥಕ್ಕಾಗಿ ಕರ್ನಾಟಕ-ತಮಿಳುನಾಡು ಸರ್ಕಾರಗಳ ನಡುವೆ ಮಧ್ಯಸ್ಥಿಕೆ ವಹಿಸಲು ನಾನು ಸಿದ್ದನಿದ್ದೇನೆ,ಒಟ್ಟಿನಲ್ಲಿ ನಾವು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಾನು ತಮಿಳುನಾಡು ಸರ್ಕಾರದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿಲ್ಲ, ನಮ್ಮ ನಾಡಿನ ಜನರ ಪ್ರತಿನಿಧಿಯಾಗಿ ಕುರುವೈ ಬೆಳೆಗೆ ನೀರು ಕೇಳಲು ಬಂದಿದ್ದೇನೆ. ನನಗೆ ಈ ಸಂದರ್ಭದಲ್ಲಿ ಸಿನಿಮಾಗಿಂತ ಕಾವೇರಿ ನದಿ ನೀರಿನ ವಿಷಯವೇ ಮುಖ್ಯ ಎಂದರು.

ರಜನಿಕಾಂತ್ ನಟಿಸಿರುವ ಕಾಲ ಚಿತ್ರ ವಿವಾದದ ಬಗ್ಗೆ ಮಾತನಾಡಲು ಕಮಲ್ ಹಾಸನ್ ನಿರಾಕರಿಸಿದರು.ನಾವು ಅದರ ಯಾವುದೇ ಚರ್ಚೆ ಮಾಡಿಲ್ಲ. ಅದಕ್ಕಾಗಿ ವಾಣಿಜ್ಯ ಮಂಡಳಿ ಇದೆ. ಅವರು ನೋಡಿಕೊಳ್ಳುತ್ತಾರೆ. ನಾನು ತಮಿಳುನಾಡು ಜನತೆಯ ಪರವಾಗಿ ಬಂದಿದ್ದೇನೆ ಅಷ್ಟೆ ಎಂದರು.

ಸಿಎಂ ಕುಮಾರಸ್ವಾಮಿ ಮಾತನಾಡಿ,ಕಾವೇರಿ ನದಿ ನೀರು ಹಂಚಿಕೆ ‌ವಿವಾದ ಸೌಹಾರ್ಹಯುತವಾಗಿ ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಸೌಹಾರ್ದತೆ ಇರಬೇಕು. ಎರಡೂ ರಾಜ್ಯಗಳ ಜನರು ಸಹೋದರ ಭಾವನೆಯಲ್ಲಿರಬೇಕು. ಈ ನಿಟ್ಟಿನಲ್ಲಿಯೇ ನಮ್ಮಿಬ್ಬರ ಚರ್ಚೆ ನಡೆದಿದೆ. ನಮ್ಮ ರೈತರೂ ಬದುಕಬೇಕು, ತಮಿಳುನಾಡಿನ ರೈತರು ಬದುಕಬೇಕು ಎನ್ನುವುದೇ ನಮ್ಮ ಉದ್ದೇಶ.ಆ ನಿಟ್ಟಿನಲ್ಲಿಯೇ ವಿವಾದ ಇತ್ಯರ್ಥಕ್ಕೆ ಪ್ರಯತ್ನ ಮುಂದುವರೆಯಲಿದೆ ಎಂದರು.

- Call for authors -

LEAVE A REPLY

Please enter your comment!
Please enter your name here