ಬೆಂಗಳೂರು: ದೆಹಲಿಯ ಜಂತರ್ ಮಂತರ್ ಬಳಿ ಸಂವಿಧಾನವನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಅಡ್ವೊಕೇಟ್ ಜನರಲಫ ಪ್ರೊ.ರವಿವರ್ಮ ಕುಮಾರ್ ಆಗ್ರಹಿಸಿದರು.
ಸಂವಿಧಾನವನ್ನು ಸುಟ್ಟ ಪ್ರಕರಣವನ್ನು ಖಂಡಿಸಿ ಹೈಕೋರ್ಟ್ ಮುಂಭಾಗ ವಕೀಲರು ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ರವಿವರ್ಮ ಕುಮಾರ್, ಸಂವಿಧಾನ ಸುಟ್ಟ ಎರಡು ಸಂಘಟನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು ಇದೆ. ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನದ ನೆರಳಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಅದರ ಆಶಯಗಳಿಗೆ ತಕ್ಕಂತೆ ನಡೆಯಬೇಕು. ಆದರೆ, ಇಂದು ಇದಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿಯಾಗಿದೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದು ಕೊಳ್ಳಲಾಗುತ್ತಿದೆ. ಸಾರ್ವಜನಿಕವಾಗಿ ರಸ್ತೆಯ ಮೇಲೆ ನಡೆದಾಡಲೂ ಅಗದಂತಹ ವಾತಾವರಣದಲ್ಲಿ ಬದುಕುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಕುರಿತು ಮನವಿ ಸಲ್ಲಿಸಲು ರಾಜ್ಯಪಾಲರ ಬಳಿ ತೆರಳಿದ ವಕೀಲರ ತಂಡದಿಂದ ರಾಜ್ಯಪಾಲರು ಮನವಿ ಸ್ವೀಕರಿಸಲಿಲ್ಲ. ಟಪಾಲು ಪೆಟ್ಟಿಗೆಯಲ್ಲಿ ಮನವಿ ಹಾಕಿ ಹೋಗುವಂತೆ ಸೂಚಿಸಿದ ರಾಜ್ಯಪಾಲರ ಸಂಪರ್ಕಾಧಿಕಾರಿ ವಕೀಲರ ತಂಡಕ್ಕೆ ಸೂಚಿಸಿದರು.
ಹೈಕೋರ್ಟ್ ಮುಂಭಾಗದಿಂದ ರಾಜಭವನಕ್ಕೆ ಹೊರಟ ಪ್ರತಿಭಟನೆಯಲ್ಲಿ ವಕೀಲರಾದ ಎಚ್.ವಿ.ಮಂಜುನಾಥ್, ದೇವದಾಸ್, ಬಾಬುರಾವ್, ಕೆ.ಬಿ.ಕೆ ಸ್ವಾಮಿ, ಡೆರಿಕ್ ಅನಿಲ್, ಎಸ್.ಮಂಜುನಾಥ್, ಮಾಳವಿಕಾ, ಅಖಿಲಾ, ಒ.ಅಶ್ವಿನಿ ಮತ್ತಿತರರು ಹಾಜರಿದ್ದರು.








