ಮೆಟ್ರೋ ನೌಕರರು, ಆಡಳಿತ ಮಂಡಳಿ ನಡುವೆ ಶೀತಲ ಸಮರ: ರಾಜ್ಯ ಸರ್ಕಾರದ ಮಧ್ಯ ಪ್ರವೇಶಕ್ಕೆ ಹೈಕೋರ್ಟ್ ಸೂಚನೆ

0
20

ಬೆಂಗಳೂರು: ಮೆಟ್ರೊ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಮತ್ತು ನೌಕರರ ಸಂಘದ ನಡುವೆ ನಡೆಯುತ್ತಿರುವ ಮೂರನೇ ಸಂಧಾನ ಸಭೆಯಲ್ಲಿ ಮಧ್ಯಪ್ರವೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಮೆಟ್ರೋ‌ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ತಡೆ ನೀಡುವಂತೆ ಕೋರಿ ಮೆಟ್ರೋ ರೈಲು ನಿಗಮ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಮುಂದಿನ ಹತ್ತು ದಿನಗಳಲ್ಲಿ ರಾಜ್ಯ ಸರ್ಕಾರ, ಬಿಎಂಆರ್ ಸಿಎಲ್ ಹಾಗೂ ಮೆಟ್ರೊ ನೌಕರರ ಸಂಘ ತ್ರಿಪಕ್ಷೀಯ ಮಾತುಕತೆ ನಡೆಸುವಂತೆ ತಿಳಿಸಿದೆ.

ಮೆಟ್ರೊ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ನೌಕರರು ಹಾಗೂ ಸಂಘದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಬೇಕೆಂದು ಸೂಚಿಸಿದ್ದು, ನೌಕರರ ಆರ್ಥಿಕ ಮತ್ತು ಆರ್ಥಿಕೇತರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪಟ್ಟಿ ಮಾಡಿಕೊಳ್ಳಿ‌. ಈ ಬಗ್ಗೆ ಹಣಕಾಸು ತಜ್ಞರ ಜೊತೆ ಚರ್ಚಿಸಿ. ಯಾವ ರೀತಿ ಸಮಸ್ಯೆ ಬಗೆಹರಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಿ ಕೋರ್ಟ್‌ಗೆ ತಿಳಿಸಿ. ಆ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸೋಣವೆಂದು ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜೂನ್ 19ಕ್ಕೆ ಮುಂದೂಡಿತು.

ಇದೇ ವೇಳೆ, ಮುಂದಿನ ವಿಚಾರಣೆವರೆಗೆ ಮುಷ್ಕರಕ್ಕೆ ಮುಂದಾಗದಂತೆ ನೌಕರರ ಸಂಘಕ್ಕೆ ಸೂಚನೆ ನೀಡಿದ್ದು, ನೌಕರರ ವಿರುದ್ಧವೂ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಬಿಎಂ‌ಆರ್‌ಸಿಎಲ್ ಗೆ ಸೂಚಿಸಿದೆ.

- Call for authors -

LEAVE A REPLY

Please enter your comment!
Please enter your name here