ಬೆಂಗಳೂರು: ಜಲಪ್ರಳಯದಿಂದ ತತ್ತರಿಸಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕುರಿತು ವಸ್ತುಸ್ಥಿತಿಯ ವರದಿಯನ್ನು ಮುಂದಿನ ಹತ್ತು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನೇತೃತ್ವದ ತಂಡ ನಿರ್ಧರಿಸಿದೆ.
ಸತತ ಮಳೆಯಿಂದ ಕಂಗಾಲಾಗಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡುವ ಕುರಿತು ಊಹಾಪೋಹದ ವರದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವನಾಥ್ ನೇತೃತ್ವದಲ್ಲಿ 25 ಮಂದಿ ತಂತ್ರಜ್ಞರ ತಂಡ ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದೆ.
ಮಡಿಕೇರಿಯಿಂದ ಆರಂಭಿಸಿ ಮಳೆಯ ರುದ್ರನರ್ತನದಿಂದ ಕಂಗೆಟ್ಟ ಕೊಡಗು ಜಿಲ್ಲೆಯಲ್ಲಿ ಪುನರ್ ನಿರ್ಮಾಣ ಕಾರ್ಯ ಹೇಗೆ ನಡೆಯಬೇಕು?ಈಗಿನ ಪರಿಸ್ಥಿತಿಗೆ ಏನು ಕಾರಣ?ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾಗದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮವೇನು?ವಾಸ್ತವವಾಗಿ ಕೊಡಗಿನ ಪುನರ್ ನಿರ್ಮಾಣ ಕಾರ್ಯಕ್ಕೆ ಆಗುವ ವೆಚ್ಚವೆಷ್ಟು?ಅನ್ನುವ ಕುರಿತು ಈ ತಂಡ ಸರ್ಕರಕ್ಕೆ ಕೂಲಂಕುಷ ವರದಿ ನೀಡಲಿದೆ.
ಮಳೆಯಿಂದ ತತ್ತರಿಸಿರುವ ಕೊರಗು ಜಿಲ್ಲೆಯಲ್ಲಿ ಮೊದಲು ಸಂಪರ್ಕ ವ್ಯವಸ್ಥೆಯನ್ನು ಸರಿಪಡಿಸಬೇಕಿದ್ದು ಇದಕ್ಕಾಗಿ ಕುಸಿದ ರಸ್ತೆ,ಸೇತುವೆಗಳನ್ನು ತ್ವರಿತವಾಗಿ ಸಜ್ಜುಗೊಳಿಸುವ ಕುರಿತೂ ತಂಡ ವರದಿ ನೀಡಲಿದೆ.
ಈಗಾಗಲೇ ಕೊಡಗು ಜಿಲ್ಲೆಯ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಊಹಾಪೋಹದ ವರದಿಗಳು ಪ್ರಕಟವಾಗುತ್ತಿದ್ದು ಇದಕ್ಕಾಗಿ ಎರಡು ಸಾವಿರ ಕೋಟಿ ರೂ ಬೇಕು,ಮೂರು ಸಾವಿರ ಕೋಟಿ ರೂ ಬೇಕು ಎಂಬಂತಹ ವರದಿಗಳು ಪ್ರಕಟವಾಗುತ್ತಿವೆ.
ಆದರೆ ಈ ವಿಷಯದಲ್ಲಿ ವಾಸ್ತವವಾಗಿ ಆಗಬೇಕಿರುವ ವೆಚ್ಚ ಎಷ್ಟು?ಅನ್ನುವ ಕುರಿತು ತಜ್ಞರ ತಂಡ ತನ್ನ ವರದಿಯಲ್ಲಿ ದಾಖಲಿಸಲಿದ್ದು ಕೇವಲ ಸರ್ಕಾರದ ಲೋಕೋಪಯೋಗಿ ಇಲಾಖೆ,ಜಲಸಂಪನ್ಮೂಲ ಇಲಾಖೆ,ಜಿಲ್ಲಾ ಪಂಚಾಯ್ತಿಗಳನ್ನು ಮಾತ್ರ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಅವಲಂಬಿಸಲು ಸಾಧ್ಯವಿಲ್ಲ ಎಂದು ಪೂರ್ವಬಾವಿಯಾಗಿ ಅಭಿಪ್ರಾಯಪಟ್ಟಿದೆ.
ಮೈಸೂರಿನ ಇನ್ಸ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಇಪ್ಪತ್ತೈದು ಮಂದಿ ಪರಿಣಿತರ ತಂಡ ವಿಶ್ವನಾಥ್ ಅವರೊಂದಿಗೆ ಕೊಡಗು ಜಿಲ್ಲೆಗೆ ಧಾವಿಸಿದ್ದು,ಪುನರ್ ನಿರ್ಮಾಣ ಕಾರ್ಯಕ್ಕೆ ಚೆನ್ನೈನ ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್ ಸಂಸ್ಥೆಯ ಸೇವೆಯನ್ನೂ ಬಳಸಿಕೊಳ್ಳಬೇಕು ಎಂದು ಈಗಾಗಲೇ ಹೇಳಿದೆ.
ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಕೊಡಗು ಪುನರ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದರೆ 60:40 ಅನುಪಾತದ ಆಧಾರದ ಮೇಲೆ ಕೆಲಸ ನಡೆಯುವುದರಿಂದ ವಾಸ್ತವವಾಗಿ ಕೊಡಗು ಪುನರ್ ನಿರ್ಮಾಣಕ್ಕೆ ಬೇಕಾಗುವ ನಿಜವಾದ ಮೊತ್ತಕ್ಕಿಂತ ಹೆಚ್ಚು ಹಣ ಪೋಲಾಗಲಿದೆ ಎಂಬುದು ಹಲವರ ಅಭಿಪ್ರಾಯ.ಈ ಹಿನ್ನೆಲೆಯಲ್ಲಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನೇತೃತ್ವದಲ್ಲಿ ಇಂದು ಕೊಡಗಿಗೆ ಧಾವಿಸಿರುವ ತಂಡ ಮುಂದಿನ ಹತ್ತು ದಿನಗಳಲ್ಲಿ ಕೊಡಗಿನ ಪುನರ್ ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ಸೂತ್ರಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.









