ಬೆಂಗಳೂರು: ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಪಾವತಿ ಮಾಡಲು ಅಗತ್ಯ ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ಳುವಂತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಮಂಗಳವಾರ ಬಿಬಿಎಂಪಿ ಹಣಕಾಸು ವಿಭಾಗಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯನ್ನು ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ನಡೆಸಿದರು.
ಈ ಸಾಲಿನಲ್ಲಿ ಈ ವರೆಗು 1614 ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಹೆಚ್ಚಾಗಿ ಕಮರ್ಷಿಯಲ್ ತೆರಿಗೆ ಪಾವತಿಯಾಗಬೇಕಿದೆ. ಇನ್ನೂ 2828 ಕೋಟಿ ರು. ಪಾವತಿ ಬಾಕಿ ಇದ್ದು, ಮುಂದಿನ ಮಾರ್ಚ್ ವರೆಗೂ ಅವಧಿ ಇದೆ. ಅಷ್ಟರೊಳಗೆ ಗುರಿಯಂತೆ ತೆರಿಗೆ ಸಂಗ್ರಹ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೆರಿಗೆ ಪಾವತಿಯನ್ನು ಆನ್‌ಲೈನ್ ವ್ಯಾಪ್ತಿಗೆ ತಂದಿರುವ ಕಾರಣ ಬಾಕಿ ಉಳಿಸಿಕೊಂಡವರು ಬಾಕಿ ಪಾವತಿಸಿಯೇ ಈ ವರ್ಷದ ತೆರಿಗೆ ಕಟ್ಟಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಾಕಿ ತೆರಿಗೆ ಪಾವತಿ ವಿಚಾರದಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಎಲ್ಲ ಜೋನಲ್ ಅಧಿಕಾರಿಗಳು ಈ ಬಗ್ಗೆ ಗಂಭೀರತೆ ಹೊಂದಿ ತೆರಿಗೆ ಪಾವತಿಗೆ ಜನರನ್ನು ಓಲೈಸಬೇಕು. ಅಥವಾ ಇದಕ್ಕೆ ಇತರೆ ಮಾರ್ಗವಿದ್ದರೆ ಸೂಚಿಸಿ ಎಂದು ಹೇಳಿದರು.
ತೆರಿಗೆ ಪಾವತಿಯಾಗದಿದ್ದರೆ ಹೆಚ್ಚು ದಂಡ ಪ್ರಯೋಗಕ್ಕೆ ಅವಕಾಶವಿದ್ದರೆ ಪ್ರಯೋಗಿಸಿ. ಈ ಬಾರಿ ತೆರಿಗೆ ದಾಖಲೆ ನಿರ್ಮಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಆಯಾ ವಲಯಗಳ ಹಣಕಾಸು ಹಾಗೂ ಇತರೆ ಕಾಮಗಾರಿಗಳ ಮಾಹಿತಿಯನ್ನು ಪಡೆದರು.
ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ಇದ್ದರು.









