ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ದೆಹಲಿ ನಿವಾಸದಲ್ಲಿ ಹಣ ದೊರೆತ ಆರೋಪಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಡಿಕೆಶಿ ಸೇರಿದಂತೆ ನಾಲ್ವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕಾಂಗ್ರೆಸ್ ಮುಖಂಡ, ಸಚಿವ ಡಿಕೆ ಶಿವಕುಮಾರ್ಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ದಾಳಿ ನಡೆಸಿದ ಸಂದರ್ಭದಲ್ಲಿ ದೆಹಲಿ ನಿವಾಸದಲ್ಲಿ ಹಣ ದೊರೆತ ಆರೋಪಕ್ಕೆ ಸಂಬಂಧಿಸಿದಂತೆ ಐಟಿ ಖಾಸಗಿ ದೂರು ದಾಖಲಿಸಿತ್ತು. ಈ ಸಂಬಂಧ ಡಿ.ಕೆ ಶಿವಕುಮಾರ್ ಜಾಮೀನು ಕೋರಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಸಲಾಯಿತು. ಈ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ದೆಹಲಿಯ ನಿವಾಸದಲ್ಲಿ ದೊರೆತಿರುವ 8 ಕೋಟಿ ರೂಪಾಯಿ ಹಣದ ಸಂಬಂಧ ಡಿಕೆ ಶಿವಕುಮಾರ್ ವಿಚಾರಣೆ ನಡೆಸಬೇಕಿದೆ ಆದ್ದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
ಡಿಕೆ ಶಿವಕುಮಾರ್ ಪರ ವಕೀಲರು, 2018-19ನೇ ಆರ್ಥಿಕ ವರ್ಷದ ಲೆಕ್ಕಾಚಾರ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ. ಈ ಸಾಲಿನಲ್ಲಿ ಇನ್ನು ಆಡಿಟಿಂಗ್ ಮಾಡಿಲ್ಲ. ಆದಾಯ ಇಲಾಖೆ ಈಗಾಗಲೇ ತನಿಖೆ ಪೂರ್ಣಗೊಳಿಸಿದೆ. ಐಟಿ ಕೋರ್ಟ್ಗೆ ಚಾರ್ಚ್ ಶೀಟ್ ನನ್ನು ಸಲ್ಲಿಸಿದೆ. ಇದು ಗಂಭೀರ ಪ್ರಕರಣವಲ್ಲ.ಹಿಂದೆ ಐಟಿ ದಾಖಲಿಸಿದ್ದ ಮೂರು ಕೇಸ್ ಗಳಲ್ಲಿ ಜಾಮೀನು ಮಂಜೂರು. ಹೀಗಾಗಿ ಪ್ರಕರಣದಲ್ಲಿ ಜಾಮೀನು ನೀಡಬೇಕು. ಅಲ್ಲದೆ ತಮ್ಮ ಕಕ್ಷಿದಾರರು ಈವರೆಗೆ ವಿಚಾರಣೆಗೆ ಸಹಕಾರ ನೀಡಿದ್ದಾರೆ. ಇನ್ನು ಮುಂದೆಯೂ ಸಹಕಾರ ನೀಡಲಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂದು ವಾದಿಸಿದರು.
ಅರ್ಜಿದಾರರ ವಾದ ಪುರಸ್ಕರಿಸಿದ ನ್ಯಾಯಾಲಯ ಡಿಕೆ ಶಿವಕುಮಾರ್, ಅಂಜನೇಯ, ಸುನೀಲ್ ಶರ್ಮಾ ಹಾಗೂ ರಾಜೇಂದ್ರಗೆ ತಲಾ ೫೦ ಸಾವಿರ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
ಐಟಿ ದಾಖಲಿಸಿದ್ದ ನಾಲ್ಕನೇ ಪ್ರಕರಣದಲ್ಲೂ ಜಾಮೀನು ದೊರೆಯುವ ಮೂಲಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಗೆ ಬಿಗ್ ರಿಲೀಫ್ ದೊರೆತಂತಾಗಿದೆ.









