ಕಾಲ ಚಿತ್ರ ಬಿಡುಗಡೆ ವಿವಾದ ಹೈ ಅಂಗಳಕ್ಕೆ: ಭದ್ರತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಚಿತ್ರತಂಡ!

0
57

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳಿನ ‘ಕಾಲ’ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಕೆಲ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಚಿತ್ರ ತಂಡ ಹೈಕೋರ್ಟ್ ಮೆಟ್ಟಿಲೇರಿದೆ.

ಚಿತ್ರ ನಿರ್ಮಾಣ ಸಂಸ್ಥೆಯಾದ ವೆಂಡರ್‌ಬರ್ ಫಿಲಂ ಪ್ರೈವೆಟ್ ಲಿಮಿಟೆಡ್ ಮತ್ತು ನಿರ್ಮಾಪಕರಾದ ರಜನಿಕಾಂತ್ ಪುತ್ರಿ ಐಶ್ವರ್ಯ ಹಾಗೂ ಅಳಿಯ ಧನುಷ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ರಾಜ್ಯ ಸರ್ಕಾರ, ಗೃಹ ಇಲಾಖೆ, ಡಿಜಿ-ಐಜಿ, ಬೆಂಗಳೂರು ಪೊಲೀಸ್ ಆಯುಕ್ತರು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್, ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಸೋಮವಾರ ನ್ಯಾಯಮೂರ್ತಿ ಜಿ. ನರೇಂದರ್ ಅವರ ಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿದ್ದರು. ಇದರಿಂದ ನ್ಯಾಯಮೂರ್ತಿಗಳು ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ನಿಗದಪಡಿಸಲು ಕೋರ್ಟ್ ಅಧಿಕಾರಿಗೆ ಸೂಚಿಸಿದರು.

ಅರ್ಜಿಯಲ್ಲೇನಿದೆ?
‘ಕಾಲ’ ಚಿತ್ರ ನಿರ್ಮಾಣಕ್ಕೆ ಈವರೆಗೆ ಒಟ್ಟು 140 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕರ್ನಾಟಕ ಸೇರಿ ಪ್ರಪಂಚದಾದ್ಯಂತ ಜೂನ್ 7ರಂದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಚಿತ್ರ ಪ್ರದರ್ಶಿಸುವುದರಿಂದ 15 ರಿಂದ 20 ಕೋಟಿ ರೂ ವರೆಗೆ ಆದಾಯ ನಿರೀಕ್ಷಿಸಲಾಗಿದೆ. ಆದರೆ, ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕರ್ನಾಟಕ ಸರ್ಕಾರ ಪಾಲಿಸಬೇಕು ಎಂದು ರಜನಿಕಾಂತ್ ಮಾಧ್ಯಮದ ಮುಂದೆ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಮೇ 28 ರಂದು ಪತ್ರಿಕಾ ಹೇಳಿಕೆ ನೀಡಿ ಚಿತ್ರದ ಬಿಡುಗಡೆಗೆ ಅಥವಾ ವಿತರಣೆಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಕರ್ನಾಟಕದಲ್ಲಿ ಚಿತ್ರದ ಪ್ರಚಾರ ಹಾಗೂ ಬಿಡುಗಡೆಗೆ ಅಗತ್ಯ ಭದ್ರತೆ ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

- Call for authors -

LEAVE A REPLY

Please enter your comment!
Please enter your name here