ರಾಜ್ಯ ಸರ್ಕಾರ ಕಮಿಷನ್ ಏಜೆಂಟ್‌ನಂತೆ ಕೆಲಸ ನಿರ್ವಹಿಸುತ್ತಿದೆ: ಬಿಎಸ್ವೈ ಆರೋಪ

0
39

ಬೆಂಗಳೂರು: ಕಮಿಶನ್ ಏಜೆಂಟರಂತೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಶೇಕಡಾ 8 ರಿಂದ 10 ರಷ್ಟು ಕಮಿಶನ್ ಕೊಡದೇ ಬಿಲ್ ಪಾಸ್ ಮಾಡಲ್ಲ ಅಂತಾ ಸಚಿವರೇ ಹೇಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು‌.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ನಾಯಕರ ವಿಶೇಷ ಸಭೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 104 ಜನ ಶಾಸಕರಿರುವ ನಾವು ಪ್ರತಿಪಕ್ಷದಲ್ಲಿ ಕೂತಿದ್ದೇವೆ, 37 ಶಾಸಕರಿರುವ ಜೆಡಿಎಸ್ ಅಧಿಕಾರದಲ್ಲಿದೆ. ಆಪರೇಷನ್ ಕಮಲದ ಬಗ್ಗೆ ಮಾತನಾಡುವ ಸಿಎಂ ಕುಮಾರಸ್ವಾಮಿಯವರು ಮೊನ್ನೆ ಕಲ್ಬುರ್ಗಿಗೆ ಹೋಗಿದ್ದಾಗ ನಮ್ಮ ಶಾಸಕ ಸುಭಾಷ್ ಗುತ್ತೇದಾರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದು, ಹತ್ತು ಬಿಜೆಪಿ ಶಾಸಕರು ತಮ್ಮ ಜತೆ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ಸ್ವತಃ ಮುಖ್ಯಮಂತ್ರಿಗಳೇ ನಮ್ಮ ಶಾಸಕರನ್ನು ಜೆಡಿಎಸ್‌ಗೆ ಬನ್ನಿ ಮಂತ್ರಿ ಮಾಡುತ್ತೇನೆ ಎಂದು ಕರೆಯುತ್ತಾರೆ ಎಂದ್ರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಈ ಸರ್ಕಾರದಲ್ಲಿ ತಮಗೆ ಉಸಿರುಕಟ್ಟುವ ವಾತಾವರಣ ಇದೆ ಎಂದು ಹಲವು ಶಾಸಕರೇ ಹೇಳುತ್ತಿದ್ದಾರೆ‌. ಈ ಸರ್ಕಾರ ಹೆಚ್ಚು ಕಾಲ ಉಳಿಯುತ್ತೆ ಎಂಬ ವಿಶ್ವಾಸ ಯಾರಿಗೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 25 ಸ್ಥಾನಗಳ ಕೊಡುಗೆಯನ್ನು ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಡಬೇಕಾಗಿದೆ ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿರುಕು ಉಂಟಾಗಿದೆ. ವಿಧಾನಸೌಧಕ್ಕೆ ಸಚಿವರು ಬಾರದೆ ಯಾವುದೇ ಜನ ಹಿತ ಕಾರ್ಯಗಳು ಆಗುತ್ತಿಲ್ಲ. ಎಲ್ಲ ಶಾಸಕರ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕಮೀಷನ್ ಏಜೆಂಟರಂತೆ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದೆ. ಎಂಟರಿಂದ ಹತ್ತು ಪರ್ಸೆಂಟ್ ಕಮೀಷನ್ ಇಲ್ಲದೆ ಕೆಲಸ ಆಗಲ್ಲ. ನೀರಾವರಿ ಮತ್ತು ಲೋಕೋಪಯೋಗಿ ಸಚಿವರು ಕಮೀಷನ್ ಏಜಂಟರಂತಾಗಿದ್ದಾರೆ ಎಂದು ಗಂಬೀರ ಆರೋಪ ಮಾಡಿದರು.

ಗೃಹ ಸಚಿವರ ಗಮನಕ್ಕೆ ತಾರದೇ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿದ್ದರಿಂದ ಕಳೆದ 4 ದಿನಗಳಿಂದ ಡಾ. ಜಿ ಪರಮೇಶ್ವರ್ ಮಾತಾಡ್ತಿಲ್ಲ ಅಪ್ಪ ಮಕ್ಕಳ ನಡೆಯಿಂದ ಅವರಿಗೂ ಅಸಮಾಧಾನವಾಗಿದೆ. ಮತ್ತೊಂದೆಡೆ ದೇವೇಗೌಡರ ಕುಟುಂಬ ವರ್ಗದವರ ಭೂ ಅಕ್ರಮದ ಬಗ್ಗೆ ಮಾಜಿ ಸಚಿವ ಓಲೆ ಮಂಜು ಬಹಿರಂಗ ಪಡಿಸಿದ್ದಾರೆ. ಜಿಲ್ಲಾಧಿಕಾರಿಯವರು ಈ ಪ್ರಕರಣದ ಬಗ್ಗೆ ಕ್ರಮ ತೆಗೆದುಕೊಳ್ಳದೇ ಇದ್ದರೆ ನಾವೂ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಿ.ಕೆ.ಶಿವಕುಮಾರ್ ತಾವು ಚೆಸ್ ಪಾನ್ ಹೇಗೆ ಮೂವ್ ಮಾಡಬೇಕು ಎಂದು ಗೊತ್ತಿದೆ ಎಂದಿದ್ದಾರೆ. ಆದರೆ, ಎದುರಾಳಿಯೇ ಇಲ್ಲದೆ ಚೆಸ್ ಗೇಮ್ ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದರು.

ಸಭೆಯಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಅರವಿಂದ್ ಲಿಂಬಾವಳಿ, ಸಿ.ಟಿ. ರವಿ, ರವಿಕುಮಾರ್ ಭಾಗಿಯಾಗಿದ್ದರು.

- Call for authors -

LEAVE A REPLY

Please enter your comment!
Please enter your name here