ಅಶೋಕ್ ವಿರುದ್ಧದ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!

0
16

ಬೆಂಗಳೂರು: ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ವಿರುದ್ಧದ ಎಸಿಬಿ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದೆ.

ಆರ್.ಅಶೋಕ್ 1998 ರಿಂದ 2006 ರ ಅವಧಿಯವರೆಗೆ ಬೆಂಗಳೂರು ದಕ್ಷಿಣ ತಾಲ್ಲೂಕು ಬಗರ್ ಹುಕುಂ ಭೂ-ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಎ.ಆನಂದ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನನ್ವಯ ಎಸಿಬಿ ಪೊಲೀಸರು ಆರ್. ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅಶೋಕ್, ತಾವು ಯಾವುದೇ ಅಕ್ರಮ ನಡೆಸಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಎಫ್ಐಆರ್ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಫ್ಐಆರ್ ಆಧರಿಸಿ ಅಶೋಕ್ ವಿರುದ್ಧ ಯಾವುದೇ ಮುಂದಿನ ಕ್ರಮ ಜರುಗಿಸದಂತೆ ಎಸಿಬಿಗೆ ಮಧ್ಯಂತರ ಆದೇಶ ನೀಡಿತ್ತು.

ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆರ್. ಬಿ. ಬೂದಿಹಾಳ್ ಅವರಿದ್ದ ಏಕಸದಸ್ಯ ಪೀಠ, ಇಂದು ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ್ದು, ಎಸಿಬಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ಹಂತದಲ್ಲಿ ಎಫ್ಐಆರ್ ರದ್ದುಪಡಿಸುವುದು ಸರಿಯಲ್ಲ. ಎಸಿಬಿ ತನಿಖೆ ಪೂರ್ಣಗೊಳಿಸಿ ಅಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಅಲ್ಲದೆ, ಪ್ರಕರಣದ ಸಂಬಂಧ ಎಸಿಬಿ ದಾಖಲಿಸಿದ್ದ ಎಫ್ಐಆರ್‌ಗೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವೂ ತೆರವುಗೊಂಡಿದ್ದು, ಎಸಿಬಿ ತನಿಖೆಗೆ ಹಸಿರು ನಿಶಾನೆ ದೊರೆತಿದೆ.

- Call for authors -

LEAVE A REPLY

Please enter your comment!
Please enter your name here