ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳ ಸೂಚನೆ

0
450

ಬೆಂಗಳೂರು: ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತಿರುವ ಪ್ರಮುಖ ರಸ್ತೆ ಕಾಮಗಾರಿಗಳ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಕುರಿತು ಅವರ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ಜರುಗಿತು. ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಭಾಗಿತ್ವದ 7556 ಕಿ.ಮೀ ರಸ್ತೆಯ ಪೈಕಿ 3463 ಕಿ.ಮೀ ರಸ್ತೆಯನ್ನು ಚತುಷ್ಪಥ ಮತ್ತು ಷಟ್ಪಥ ರಸ್ತೆಗಳನ್ನಾಗಿ ಪರಿವರ್ತಿಸಲು 36,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಯೋಜನೆಗಳು ಅನುಷ್ಠಾನಕ್ಕೆ ಬರಲು ಇಂಧನ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ಸಹಯೋಗದಲ್ಲಿ ಕೆಲಸವಾಗಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ತೊಡಕುಗಳನ್ನು ನಿವಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು ಅಗತ್ಯವಿರುವ ಕಡೆಗಳಲ್ಲಿ ರಾಜ್ಯ ಭೂಸ್ವಾಧೀನ ಅಧಿಕಾರಿಯನ್ನು ಶೀಘ್ರವಾಗಿ ನೇಮಿಸಲು ಸೂಚನೆ ನೀಡಿದರು.

ಅರಣ್ಯ ಇಲಾಖೆಯ ನಿಯಮಗಳ ಹಿನ್ನೆಲೆಯಲ್ಲಿ ಕಾಮಗಾರಿಗಳು ಕುಂಠಿತವಾಗಿರುವ ಹಿನ್ನೆಲೆಯಲ್ಲಿ 15 ದಿನಕ್ಕೊಮ್ಮೆ ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸುತ್ತಿದ್ದಾರೆ. ಒಟ್ಟು 3890 ಕೋಟಿ ರೂ.ಗಳ ವೆಚ್ಚದಲ್ಲಿ ಬೆಂಗಳೂರು- ಮೈಸೂರು ಷಟ್ಪಥ ರಸ್ತೆ (ಪ್ಯಾಕೇಜ್ -1) ರಲ್ಲಿ. ಪ್ಯಾಕೇಜ್ 2 ರನ್ನು 3300 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದು, ಒಟ್ಟಾರೆ ಎರಡೂ ಪ್ಯಾಕೇಜ್ಗಳಿಂದ 7000 ಕೋಟಿ ರೂ.ಗಳ ವೆಚ್ಚವಾಗುತ್ತಿದ್ದು, ಇದೇ ತಿಂಗಳ ಅಂತ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುವ ಉದ್ದೇಶವಿದೆ. ಆದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ, ಮರಗಳನ್ನು ಕಡಿಯುವ ಪ್ರಕ್ರಿಯೆ ಹಾಗೂ ಕೆಪಿಟಿಸಿಎಲ್ಗೆ ಸೇರಿದ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯವನ್ನು ತ್ವರಿತವಾಗಿ ಪೂರೈಸುವಂತೆ ಸೂಚನೆ ನೀಡಿದರು.

ಬೆಂಗಳೂರು, ಚಿತ್ರದುರ್ಗ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಗೊಳಪಡುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಲು ಇರುವ ಅಡೆತಡೆಗಳನ್ನು ನಿವಾರಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಲು ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ , ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸಚಿವ ವೆಂಟಕರಾವ್ ನಾಡಗೌಡ, ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಎಸ್.ಪುಟ್ಟರಾಜು, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

- Call for authors -

LEAVE A REPLY

Please enter your comment!
Please enter your name here