ಕೆ.ಆರ್. ಮಾರುಕಟ್ಟೆಯಂಥ ಮೂರು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ- ಡಿಸಿಎಂ ಡಾ.ಜಿ. ಪರಮೇಶ್ವರ್

0
37

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮಾದರಿಯಲ್ಲೇ ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯ ಭಾಗದಲ್ಲಿ ಬೃಹತ್ ಮಾರುಕಟ್ಟೆ ನಿರ್ಮಾಣ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದರು.

ಕೆ.ಆರ್. ಮಾರುಕಟ್ಟೆ ವಿವಿಧ ಭಾಗಗಳಿಗೆ ಭೇಟಿ‌ ನೀಡಿದ ಅವರು ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆ.ಆರ್.‌ ಮಾರುಕಟ್ಟೆಯಲ್ಲಿ ಬಹಳಷ್ಟು ವ್ಯಾಪಾರಸ್ಥರು ಬಾಡಿಗೆ ನೀಡದೇ ನಡೆಸುತ್ತಿದ್ದಾರೆ. ವ್ಯಾಪಾರಸ್ಥರಿಗಾಗಿಯೇ ನಿರ್ಮಿಸಿರುವ ಕಟ್ಟಡವನ್ನು ಬಳಕೆ ಮಾಡಿಕೊಳ್ಳದೇ ಬೀಗ ಹಾಕಿದ್ದಾರೆ. ವ್ಯಾಪಾರಸ್ಥರೇ ಹೋಗುವುದಿಲ್ಲ ಎಂಬ ದೂರು ಇದೆ.‌ ಆ ಜಾಗವನ್ನು ಪಾರ್ಕಿಂಗ್ ಅಥವಾ ಇತರೆ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ್ರು.

ಮಾರುಕಟ್ಟೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಯಾವುದೂ ಸೂಕ್ತ ರೀತಿಯಲ್ಲಿ ಇಲ್ಲ. ಇಲ್ಲಿನ ಅಧಿಕಾರಿಗಳು ಹೆಚ್ಚು ನಿರ್ಲಕ್ಷ್ಯದಿಂದ ಇರುವುದು ಗಮನಕ್ಕೆ ಬಂದಿದೆ. ನಾನೇ ಖುದ್ದು ಪ್ರತಿಯೊಂದನ್ನು ವೀಕ್ಷಿಸಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ.‌ ಕೆ.ಆರ್. ಮಾರುಕಟ್ಟೆಗೆ ಲಕ್ಷಾಂತರ ಜನ ಬರುವುದರಿಂದ ಸದಾ ಗಿಜುಗುಡುತ್ತಿದೆ.‌ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರದ ವಿವಿಧ ಭಾಗಗಳಲ್ಲಿ ಕೆ.ಆರ್. ಮಾರುಕಟ್ಟೆ ಮಾದರಿಯಲ್ಲೇ ಮಾರುಕಟ್ಟೆ ತೆರೆಯುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೌನ್ಸಿಲಿಂಗ್ ಮೂಲಕ ಒಪ್ಪಿಗೆ ಪಡೆದು, ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದ್ರು.

ಕೆ.ಆರ್. ಮಾರುಕಟ್ಟೆಯನ್ನು‌ ಕಾಯಕಲ್ಪ ಮಾಡಲಾಗುವುದು. ಜೊತೆಗೆ ಇಲ್ಲಿ ಬಾಡಿಗೆ ನೀಡದೇ ವ್ಯಾಪಾರ ಮಾಡುವವರು ಬಗ್ಗೆ ಹಾಗೂ ಈ ಭಾಗದ ಬಿಬಿಎಂಪಿ ಪ್ರಾಪರ್ಟಿ ಬಗ್ಗೆ 15 ದಿನದೊಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮೇಯರ್ ಗಂಗಾಂಭಿಕೆ, ಉಪಮೇಯರ್ ರಮೀಳ‌ಉಮಾಶಂಕರ್, ನಗರ ಪೊಲೀಸ್ ಆಯುಕ್ತ ಸುನೀಲಗ ಕುಮಾರ್ ಉಪಸ್ಥಿತರಿದ್ದರು.

ಅಧಿಕಾರಿ ಅಮಾನತು:
ಮಾರುಕಟ್ಟೆಯೊಳಗೆ ನಿರ್ಮಿಸಿದ್ದ ಸಾಲು ಅಂಗಡಿಗಳು ಯಾವ ಇಲಾಖೆ ವ್ಯಾಪ್ತಿಗೆ ಸೇರಲಿದೆ ಎಂದು ಪರಮೇಶ್ವರ್ ಅವರು ಮಾರುಕಟ್ಟೆ ಡಿಸಿ ಮುನಿಲಕ್ಷ್ಮಿ ಅವರ ಬಳಿ ಮಾಹಿತಿ ಕೇಳಿದರು.‌ಆದರೆ ಈ ಬಗ್ಗೆ ಅವರಿಗೇ ಮಾಹಿತಿ ಇಲ್ಲದೇ ಇರುವುದಕ್ಕೆ ಆಕ್ರೋಶಗೊಂಡರು. ಏನು‌ ಕೆಲಸ‌ ಮಾಡುತ್ತೀದೀರ? ನಿಮ್ಮ ಇಲಾಖೆ ಪ್ರಾಪರ್ಟಿ ಯಾವುದು ಎಂಬುದೇ ಗೊತ್ತಿಲ್ಲವೆಂದರೆ ಯಾಕೆ ಈ ಸ್ಥಾನದಲ್ಲಿ ಇರಬೇಕು? ಎಂದು ಚಾಟಿ ಬೀಸಿದರು. ಜತೆಗೆ ಈ ಅಧಿಕಾರಿಯನ್ನು ಅಮಾನತುಗೊಳಿಸಿರುವುದಾಗಿ ಮಾಧ್ಯಮಕ್ಕೆ ಹೇಳಿದರು.

ಮೀಟರ್ ಬಡ್ಡಿಗೆ ಕಡಿವಾಣ:
ಮಾರುಕಟ್ಟೆಯಲ್ಲಿ ಮೀಟರ್ ಬಡ್ಡಿ ದಂದೆ ನಡೆಯುತ್ತಿರುವ ಬಗ್ಗೆ ನನಗೂ‌ ಮಾಹಿತಿ ಇದೆ. ಹೀಗಾಗಿ ಈ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

ಮಾರುಕಟ್ಟೆಯಲ್ಲಿಯೇ ಸಗ್ರಿಗೇಷನ್ ಕೇಂದ್ರ ಇದ್ದರೂ ಅಲ್ಲಿ ಕಸ ಸಂಸ್ಕರಣೆ ಮಾಡದೇ ಇರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಯಾವ ಕಾರಣಕ್ಕಾಗಿ ಈ ಕೇಂದ್ರ ಮುಚ್ಚಲಾಗಿದೆ ಎಂದು ಅಧಿಕಾರಿಗಳ ಮಾಹಿತಿ ಕೇಳಿದರೆ, ಅದಕ್ಕೆ ಉತ್ತರ ನೀಡದೇ ತಡಬಡಾಯಿಸಿದರು. ಇದರಿಂದ‌ ಕೋಪಗೊಂಡ ಅವರು ಒಂದು ವಾರದೊಳಗೆ ಯಾಕೆ ಈ‌ಕೇಂದ್ರ ನಿಷ್ಕ್ರಿಯೆಗೊಂಡಿದೆ ಎಂದು ಮಾಹಿತಿ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮಾರುಕಟ್ಟೆಯೊಳಗೆ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಕೇಂದ್ರದಲ್ಲಿ ಸಾಕಷ್ಟು ಹಳೇ ವಾಹನಗಳು ಇರುವುದನ್ನು‌ ಗಮನಿಸಿದರು. ಮಾಲೀಕರಿಲ್ಲದ ವಾಹನಗಳನ್ನು ಪೊಲೀಸರ ನೆರವಿನೊಂದಿಗೆ ಹರಾಜ ಹಾಕುವಂತೆ ಸೂಚಿಸಿದರು.

ಮೀನು ಮಾರುಕಟ್ಟೆಗೆ ತೆರಳಿದ ಪರಮೇಶ್ವರ್ ಅವರು, ಅಲ್ಲಿನ ಅವ್ಯವಸ್ಥೆ ಹಾಗೂ ದುರ್ವಾಸನೆಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಈ ಭಾಗದಲ್ಲಿ ಇಷ್ಟೋಂದು ದುರ್ನಾಥ ಇದ್ದರೂ ಬಿಬಿಎಂಪಿ ಕಸ ವಿಲೇವಾರಿ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕಸವನ್ನು ತೆರವುಗೊಳಿಸುವಂತೆ ಸೂಚಿಸಿದರು.

- Call for authors -

LEAVE A REPLY

Please enter your comment!
Please enter your name here