ಬೀದರ್: ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಪರಿಹಾರ ಕಲ್ಪಿಸುವ ಕಾರ್ಯ ಯುದ್ದೋಪಾದಿಯಲ್ಲಿ ನಡೆಯಬೇಕು. ಕೇಂದ್ರ ಸ್ಥಾನದಲ್ಲಿದ್ದುಕೊಂಡು 24 ತಾಸುಗಳ ಕಾಲವೂ ಜಾಗೃತರಾಗಿ ಅಗತ್ಯ ಪೂರ್ವಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅ.25 ರಂದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬರ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಬರ ಎದುರಾಗಿದೆ ಎಂದು ಹಳ್ಳಿಗಳ ಜನರು ಬೇರೆಡೆ ಉದ್ಯೋಗ ಅರಸಿ ಹೋಗಬಾರದು. ಅಲ್ಲಿಯೇ ಉದ್ಯೋಗ ಸೃಷ್ಟಿಸಿ. ಉದ್ಯೊಗ ಖಾತರಿ ಯೋಜನೆಯಡಿ ಜನತೆಗೆ ಕೆಲಸ ಕೊಡಿಸಿ ಎಂದು ಸಚಿವರು ಸೂಚಿಸಿದರು. ಬರ ಬಂದು ಕೆಲವು ಹಳ್ಳಿಗಳಲ್ಲಿ ಜನರು ಸುಸ್ತಾಗಿದ್ದಾರೆ. ಈ ಬಗ್ಗೆ ತಾವು ಕೂಡ ಗಮನ ಹರಿಸಿ ಎಂದು ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಿಗೆ ತಿಳಿಸಿದರು.
ಬರಪೀಡಿತ ಹಳ್ಳಿಗಳಲ್ಲಿ ಕುಡಿವ ನೀರು ಕಲ್ಪಿಸಲು ಮೊದಲ ಆದ್ಯತೆ ಕೊಡಿ. ಸಮಸ್ಯೆಯನ್ನು ಆಯಾ ಶಾಸಕರ ಗಮನಕ್ಕೆ ತಂದು ಬೋರವೆಲ್ ಹಾಕಿಸಲು ಕ್ರಮ ವಹಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
*ಡಂಗೂರ ಹೊಡೆಸಿ* : ಕೆಲಸ ಕೊಡಿಸಿ ಎಂದು ಬರಪೀಡಿತ ಹಳ್ಳಿಗಳ ಜನರು ಸಚಿವರು ಹಾಗು ಶಾಸಕರ ಹತ್ತಿರ ಕೇಳಿ ಬರುವುದು ನಿಲ್ಲಬೇಕು. ಈ ಹಿನ್ನೆಲೆಯಲ್ಲಿ ಆಯಾ ಹಳ್ಳಿಗಳಲ್ಲಿ ನಾಳೆಯಿಂದಲೇ ಡಂಗೂರ ಹೊಡೆಸಿ ಕೆಲಸ ಕೊಡುತ್ತೇವೆ ಎಂದು ಜನತೆಗೆ ತಿಳಿಸಿ. ಕಾಮಗಾರಿಗಳ ವಿವರವನ್ನು ಆಯಾ ಪಂಚಾಯಿತಿಗಳ ನೋಟಿಸ್ ಬೋರ್ಡನಲ್ಲಿ ಹಾಕಿರಿ ಎಂದು ಸಚಿವರು ತಾಪಂ ಇಒಗಳಿಗೆ ನಿರ್ದೇಶನ ನೀಡಿದರು.
*50 ಹಳ್ಳಿಗಳಲ್ಲಿ ಸಮಸ್ಯೆ* : ಈ ಸಂಬಂಧ ಅಧಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.ಬೀದರ ತಾಲೂಕಿನ 50 ಹಳ್ಳಿಗಳಲ್ಲಿ ಕುಡಿವ ನೀರಿನ ಕೊರತೆ ಸೇರಿದಂತೆ ಕೆಲ ಸಮಸ್ಯೆ ಇರುವುದು ಕಂಡು ಬಂದಿದೆ ಎಂದು ಬೀದರ ತಹಸೀಲ್ದಾರ, ತಾಪಂ ಇಒ ಹಾಗೂ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
*ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ:* ಸಮಸ್ಯೆ ಇದೆ ಅಂತ ಕೆಲ ಹಳ್ಳಿಗಳ ಗ್ರಾಮಸ್ಥರು ಮನೆಗೆ ಬರುತ್ತಿದ್ದಾರೆ. ಅಧಿಕಾರಿಗಳಿದ್ದೂ ಜನ ನಮ್ಮ ಹತ್ತಿರ ಸಮಸ್ಯೆ ಹೇಳಿ ಬರುವಂತಾಗಬಾರದು. ಬರ ಘೋಷಣೆಯಾಗಿ ತಿಂಗಳಾದರೂ ಹುಮನಾಬಾದ್ ತಾಲೂಕಿನ ಒಂದೂ ಹಳ್ಳಿಯಲ್ಲಿ ಬೋರವೆಲ್ ಹಾಕಿಸಿಲ್ಲ ಎನ್ನುವುದು ಸರಿಯಲ್ಲ ಎಂದು ಸಚಿವರು ಅಧಿಕಾರಿಗಳ ಕಾರ್ಯವೈಖರಿಗೆ
ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆ ಇದ್ದರೂ ಸಂಬಂಧಿಸಿದ ಶಾಸಕರು ಹತ್ತಿರ ತಾವೇಕೆ ಹೋಗಿಲ್ಲ. ಅವರೊಂದಿಗೆ ಯಾಕೆ ಸಭೆ ನಡೆಸಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
*ತಿಂಗಳ ಬಳಿಕ ಸಮಸ್ಯೆ ಆಗಬಹುದು* :
ಔರಾದ ತಾಲೂಕಿನಲ್ಲಿ ಸದ್ಯಕ್ಕೆ ಯಾವ ಹಳ್ಳಿಯಲ್ಲೂ ಕುಡಿವ ನೀರಿನ ಸಮಸ್ಯೆ ಇಲ್ಲ. ತಿಂಗಳ ಬಳಿಕ ಸಮಸ್ಯೆ ಆಗಬಹುದು ಎಂದು ಔರಾದ ತಹಸೀಲ್ದಾರ ತಿಳಿಸಿದರು.
*ಅಧಿಕಾರಿಗಳಿಗೆ ಎಚ್ಚರಿಕೆ* : ಎಂಟು ದಿನಗಳ ಬಳಿಕ ನಾನು ಹಳ್ಳಿಗಳಿಗೆ ಭೇಟಿ ನೀಡುವೆ. ಆ ವೇಳೆ ಬರಪೀಡಿತ ಹಳ್ಳಿಯ ಜನ ಕೆಲಸ ನೀಡಿಲ್ಲ ಎಂದು ಅಳಲು ತೋಡಿಕೊಂಡರೆ ಆ ಕೂಡಲೇ ಸಂಬಂಧಿಸಿದ ಪಂಚಾಯಿತಿಯ ಪಿಡಿಒ ಅವರನ್ನು ಅಮಾನತುಗೊಳಿಸಲಾಗುವುದು. ಕುಡಿವ ನೀರು ಸಿಗುತ್ತಿಲ್ಲ ಎಂದು ಯಾರಾದರು ಹೇಳಿದರೆ ತಮ್ಮ ಮೇಲೆ ಕೂಡ ಅಮಾನತಿಗೆ ಕ್ರಮವಹಿಸಲಾಗುವುದು ಎಂದು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
*ಹಣಕ್ಕೆ ಕೊರತೆಯಿಲ್ಲ* : ಈಗ ಜನತೆ ಬೆಳೆ ಕಟಾವಿನಲ್ಲಿ ತೊಡಗಿದ್ದಾರೆ. ಇದು ಮುಗಿದ ಬಳಿಕ ಜನರು ಕೆಲಸ ಕೇಳಬಹುದು. ತಾವು ಬೇರೆ ಬೇರೆ ಹೋಬಳಿಗಳಲ್ಲಿ ನಡೆಸಿದ ಜನಸ್ಪಂದನ ಸಭೆಯಲ್ಲಿ ಜನರಿಂದ ಕೆಲಸದ ಬೇಡಿಕೆ ಬಂದಿರುವುದಿಲ್ಲ. ಜನರು ಕೆಲಸ ಕೇಳಿ ಬಂದರೆ ಕೂಡಲೆ ಸ್ಪಂದಿಸುವುತ್ತೇವೆ. ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್. ಮಹಾದೇವ ಅವರು ತಿಳಿಸಿದರು.
*ಕ್ರಮ ವಹಿಸಲಾಗಿದೆ* : ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರು ಮಾತನಾಡಿ, ಬರದ ಹಿನ್ನೆಲೆಯಲ್ಲಿ ತುರ್ತು ಆಗಬೇಕಾದ ಕೆಲಸದ ಪಟ್ಟಿಯನ್ನು ಮಾಡಿಕೊಂಡು ಆದ್ಯತೆಯ ಮೇರೆಗೆ ಕುಡಿವ ನೀರು ಕೊಡುವ, ಉದ್ಯೋಗ ನೀಡುವ ನಾನಾ ಕಾರ್ಯಗಳನ್ನು ಜನತೆಗೆ ಕಾಣುವ ರೀತಿಯಲ್ಲಿ ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
*ಮೇವಿನ ತೊಂದರೆ ಇಲ್ಲ :*
ಮೇವಿನ ತೊಂದರೆ ಇಲ್ಲ ಸದ್ಯ. ಮೇವಿನ ಬೀಜ ವಿತರಣೆಗೆ ಕ್ರಮ ವಹಿಸಲಾಗಿದೆ. ಜಾನುವಾರುಗಳಿಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರು, ತಹಸೀಲ್ದಾರರು ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.









