ಮತ್ತೆ ಕೆಣಕಿದ್ರೆ ಬೇಲ್ ರದ್ದಾಗಿ ಜೈಲಿಗೋಗುತ್ತೀರಿ: ರೆಡ್ಡಿಗೆ ಸಿದ್ದು ಟಾಂಗ್

0
20

ಕೂಡ್ಲಿಗಿ:ಸದನದಲ್ಲಿ ನಮ್ಮನ್ನು ಕೆಣಕಿ‌ ಸವಾಲೆಸೆದು ಜೈಲುಪಾಲಾಗಿ ಹೋಗಿದ್ದಿರಿ ಈಗ ನಮ್ಮನ್ನು ಮತ್ತೆ ಕೆಣಕಲು ಬರಬೇಡಿ, ಬೇಲ್ ರದ್ದಾಗಿ ಮತ್ತೆ ಜೈಲಿಗೆ ಹೋಗಬೇಕಾದೀತು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕೂಡ್ಲಿಗಿಯಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್-ಜೆಡಿಎಸ್ ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿಗಳಾದ ದೇವೇಗೌಡರೊಂದಿಗೆ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ,ಜನಾರ್ಧನ ರೆಡ್ಡಿ ಸವಾಲು ಸ್ವೀಕರಿಸಿರುವುದಾಗಿ ಪ್ರಕಟಿಸಿದರು.ಚಳ್ಳಕೆರೆ, ಪಾವಗಡ, ಮೊಳಕಾಲ್ಮೂರುಗಳಿಗೆ ಕುಡಿಯುವ ನೀರಿನ ಪೂರೈಕೆಗೆ ತುಂಗಭದ್ರಾ ಹಿನ್ನೀರನ್ನು ಪೂರೈಸುವ ಶಾಶ್ವತ ಯೋಜನೆಯನ್ನು ರೂಪಿಸಿ, ಟೆಂಡರ್ ಕರೆದು, ಟೆಂಡರ್ ಎಜೆನ್ಸಿಯನ್ನು ಕೂಡ ನಿಗದಿಪಡಿಸಿರುವುದು ನಮ್ಮ‌ ಸರ್ಕಾರ. ಜನಾರ್ಧನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಮಂತ್ರಿಯಾಗಿದ್ದಾಗ ಜಿಲ್ಲೆಗೆ ಏನು ಮಾಡಿದ್ದಾರೆ? ಈ ಯೋಜನೆಯ ಅನುಷ್ಠಾನಕ್ಕಾಗಿ ರೂ.2250 ಬಳಕೆ ಮಾಡಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಇಷ್ಟು ದೊಡ್ಡ ಮೊತ್ತದ ಯೋಜನೆಯನ್ನು ಜಾರಿಗೊಳಿಸಿದ್ದು ಇದೇ ಮೊದಲು. ಬೆಂಗಳೂರಿನ ಶಾಸಕರ ಭವನ ಆವರಣದಲ್ಲಿ ವಾಲ್ಮೀಕಿ ಹಾಗೂ ಕನಕದಾಸರ ಪ್ರತಿಮೆ ಸ್ಥಾಪನೆಗೆ ನಿಜವಾಗಿ ಶ್ರಮಿಸಿದವರು ಉಗ್ರಪ್ಪನವರು ಎಂದು ಹೇಳಲು ನನಗೆ ಹೆಮ್ಮೆಯಿದೆ ಎಂದ್ರು.

1991ರಲ್ಲಿ ದೇವೇಗೌಡರು ಲೋಕಸಭಾ ಸದಸ್ಯರಾಗಿದ್ದಾಗ ಉಗ್ರಪ್ಪನವರು ನಾಯಕ, ವಾಲ್ಮೀಕಿ ಮುಂತಾದ ಜಾತಿಗಳಿಗೆ ಎಸ್.ಟಿ ಮೀಸಲಾತಿ ದೊರೆಯುವಂತೆ ಮಾಡಿದ್ದರು. ಇಂದು ಎಸ್.ಟಿ ಮೀಸಲು ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸಿ ಲೋಕಸಭೆಗೆ ಹೋಗಿದ್ದರೆ ಅದು ದೇವೇಗೌಡರು ಮತ್ತು ಉಗ್ರಪ್ಪನವರ ಕೊಡುಗೆ ಎಂಬುದನ್ನು ಅವರು ಮರೆಯಬಾರದು ಎಂದು ರಾಮುಲು ಕಾಲೆಳೆದ್ರು.

ಚಿನ್ನದ ಕಮೋಡ್, ಚಿನ್ನದ ಕುರ್ಚಿ ಇವೆಲ್ಲ ಜನಾರ್ಧನ ರೆಡ್ಡಿಯವರ ವೈಭವದ ಜೀವನಕ್ಕೆ ಸಾಕ್ಷಿಗಳು. ಇಷ್ಟೆಲ್ಲ ಎಲ್ಲಿಂದ ಬಂತು? ಇವರೇನು ಸಾಮ್ರಾಟ ವಂಶಸ್ಥರೇ?
ಈ‌ ಸಂಪತ್ತು ಗಣಿಲೂಟಿಯ ಸಂಪಾದನೆ ಎನ್ನುವುದು ಬಳ್ಳಾರಿ ಮಾತ್ರವಲ್ಲ‌ ಇಡೀ ದೇಶಕ್ಕೆ ಗೊತ್ತು. ಇಷ್ಟಾದ ಮೇಲೆಯೂ ತಮ್ಮನ್ನು ಪ್ರಾಮಾಣಿಕರೆಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ವೇ ಎಂದ್ರು.

ಜನಾರ್ಧನ ರೆಡ್ಡಿಯವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ, ಅವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ.
ಬಳ್ಳಾರಿಯಿಂದ‌ ಗಡಿಪಾರಾಗಿರುವ ರೆಡ್ಡಿಯವರೇ ಚರ್ಚೆಯ ಸ್ಥಳ ಮತ್ತು ಸಮಯ ನಿಗದಿಪಡಿಸಲಿ.ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿಯ ಮೇಲೆ ಸದನದಲ್ಲಿ ಚರ್ಚೆ ನಡೆದಿದ್ದಾಗ ತಾಕತ್ತಿದ್ದರೆ ಬಳ್ಳಾರಿಗೆ ಬರುವಂತೆ ಜನಾರ್ಧನ ರೆಡ್ಡಿ ನನಗೆ ಸವಾಲುಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ. ಆ ದಿನದಿಂದಲೇ ರೆಡ್ಡಿ ಗ್ಯಾಂಗ್ ಕಟ್ಟಿದ್ದ ಬಳ್ಳಾರಿ ರಿಪಬ್ಲಿಕ್ ಕುಸಿಯಲಾರಂಭಿಸಿತ್ತು. ಅದರ ನಂತರ ಜನಾರ್ಧನ ರೆಡ್ಡಿ ಜೈಲುಪಾಲಾಗಿ ಹೋದರು ಎಂದ್ರು.

- Call for authors -

LEAVE A REPLY

Please enter your comment!
Please enter your name here