ಬೆಂಗಳೂರು: ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹಿಂದೆ ಸರಿದಿದ್ದು, ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಬೆಂಬಲ ಘೋಷಿಸಿದ್ದಾರೆ. ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಚುನಾವಣಾ ಕಣದಿಂದ ಹಿಂದೆಸರಿದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.
ಕಾಂಗ್ರೆಸ್ ಮುಖಂಡ ಸಿ.ಪಿ.ಲಿಂಗಪ್ಪ ಪುತ್ರ ಚಂದ್ರಶೇಖರ್ ಅವರನ್ನು ತೆಕ್ಕೆಗೆ ತೆಗೆದುಕೊಂಡಿದ್ದ ಕಮಲಪಾಳಯ ಉಪ ಚುನಾವಣೆಯಲ್ಲಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಆದ್ರೆ, ಇದೀಗ ಬಿಜೆಪಿ ನಾಯಕರ ಧೋರಣೆಗೆ ಬೇಸತ್ತು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಚಂದ್ರಶೇಖರ್ ತಿಳಿಸಿದರು.
ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಡಿ.ಕೆ.ಸುರೇಶ್‌ರೊಂದಿಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್, ನಾನು ಮೂಲತಃ ಕಾಂಗ್ರೆಸ್ ಪಕ್ಷದವನು. ಬಿಜೆಪಿಗೆ ಸೇರಿ ಟಿಕೆಟ್ ಕೊಡುತ್ತೇವೆ ಅಂದ್ರು, ಹಾಗಾಗಿ ಬಿಜೆಪಿಗೆ ಸೇರಿದೆ. ಆದರೆ, ಬಿಜೆಪಿಯ ಯಾವೊಬ್ಬ ನಾಯಕರೂ ಪ್ರಚಾರಕ್ಕೆ ಬರಲಿಲ್ಲ. ನನಗೆ ತುಂಬಾ ನೋವು ಕೊಟ್ಟರು. ಅಲ್ಲಿ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗೋದಿಲ್ಲ. ಬಿಜೆಪಿಯಲ್ಲಿ ನಾಯಕರ ಒಗ್ಗಟ್ಟು ಇಲ್ಲ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ನಮ್ಮ ಸಂಪರ್ಕಕ್ಕೇ ಸಿಗಲಿಲ್ಲ. ನಿನ್ನೆ ಯಡಿಯೂರಪ್ಪ ಅವರ ಬಳಿ ಮಾತನಾಡಲು ಯತ್ನಿಸಿದೆ. ಆದರೆ, ಅವರು ನನ್ನ ಜೊತೆ ಮಾತನಾಡಲೇ ಇಲ್ಲಾ. ಸದಾನಂದಗೌಡರು ಬಂದು ಪ್ರೆಸ್ ಮೀಟ್ ಮಾಡಿದ್ರು ಅಷ್ಟೇ. ಇದಕ್ಕೆಲ್ಲಾ ಕಾರಣ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ನನ್ನನ್ನು ಬಲಿ ಪಶು ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸಹವಾಸವೇ ಬೇಡ ಎಂದು ನನ್ನ ಮಾತೃ ಪಕ್ಷಕ್ಕೆ ಹಿಂದಿರುಗಿದ್ದೇನೆ. ನನ್ನ ಬೆಂಬಲವನ್ನು ಮೈತ್ರಿ ಅಭ್ಯರ್ಥಿಗೆ ನೀಡುತ್ತೇನೆ. ನನ್ನ ಆತ್ಮಸ್ಥೈರ್ಯ ಕುಂದದಂತೆ ನೋಡಿ ಕೊಂಡ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಒಟ್ಟಾರೆಯಾಗಿ ಚುನಾವಣೆ ಇನ್ನೆರಡು ದಿನ ಬಾಕಿ ಉಳಿದಿರುವ ಈ ಅವಧಿಯಲ್ಲಿ ಅಭ್ಯರ್ಥಿ ಕಣದಿಂದ ಹಿಂದೆ ಸರದಿರುವುದು ಬಿಜೆಪಿಗೆ ದೊಡ್ಡ ಹಿನ್ನೆಡೆಯಾಗಿದೆ.








