ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಮೈತ್ರಿ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕಿಳಿಯಲಿದ್ದಾರೆ. ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ಬೆಂಗಳೂರಿನಲ್ಲಿಂದು ಮಧುಬಂಗಾರಪ್ಪ ಭೇಟಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಮಧು ಬಂಗಾರಪ್ಪ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಶಿವಮೊಗ್ಗ ಬೈ ಎಲೆಕ್ಸನ್ ನಲ್ಲಿ ಉತ್ತಮ ಹೋರಾಟ ಮಾಡಿದ್ದಾರೆ. ವಿದೇಶದಲ್ಲಿದ್ದ ವೇಳೆ ಸಿಎಂ ಕುಮಾರಸ್ವಾಮಿ ಅವ್ರು ಮಧುಗೆ ಸ್ಪರ್ಧಿಸಬೇಕು ಅಂತಾ ಹೇಳಿದ ತಕ್ಷಣವೇ. ವಿದೇಶದಿಂದ ವಾಪಸ್ ಬಂದು ಕಣಕ್ಕಿಳಿದ್ರು. 3 ಲಕ್ಷ ಲೀಡ್ ನಲ್ಲಿದ್ದ ಯಡಿಯೂರಪ್ಪ ಅವರ ಗೆಲುವನ್ನ 50 ಸಾವಿರಕ್ಕೆ ಇಳಿಸಿದ್ದು ಮಧು ಗರಿಮೆ. ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದರು.
ಯಡಿಯೂರಪ್ಪನವರ ಭದ್ರ ಕೋಟೆಯಲ್ಲಿ ದೊಡ್ಡ ಬಿರುಕು ಬಿಟ್ಟಿದೆ. ಬಳ್ಳಾರಿ ದೆಹಲಿಗೆ ಮಾರ್ಗವಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಅಲ್ಲೂ ಕೂಡ ಅವರ ಕೋಟೆ ಛಿದ್ರ ಛಿದ್ರವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಎಲ್ಲೂ ಸುತ್ತಾಡದಂತೆ ಮಧು ಅವರನ್ನು ಶಿವಮೊಗ್ಗದಲ್ಲಿ ಕಟ್ಟಿಹಾಕಿದರು. ಮಧು ಕೇವಲ ಶಿವಮೊಗ್ಗಕ್ಕೆ ಸೀಮಿತವಲ್ಲ ಅವರು ರಾಜ್ಯದ ನಾಯಕರು. ಯುವಕರಿದ್ದಾರೆ ಅವರ ಭವಿಷ್ಯ ಉತ್ತಮವಾಗಿದೆ ಎಂದು ಹೇಳಿದರು.
2019 ಚುನಾವಣೆಯಲ್ಲಿ ಮೈತ್ರಿ ಸಂಬಂಧ ಆದಷ್ಟು ಬೇಗ ಎರಡೂ ಪಕ್ಷಗಳು ಮಾತುಕತೆ ಶುರು ಮಾಡುತ್ತೇವೆ. ಈಗಾಲೇ ಮೂರು ಕ್ಷೇತ್ರಗಳಲ್ಲಿ ಹಂಚಿಕೆ ಆಗಿದೆ. ಉಳಿದ 25 ಕ್ಷೇತ್ರಗಳನ್ನು ಎರಡೂ ಪಕ್ಷಗಳು ಮಾತುಕತೆ ನಡೆಸಿ ಹಂಚಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಮಧುಬಂಗಾರಪ್ಪ, ಸೋಲನ್ನು ನನ್ನ ಹೆಗಲಿಗೆ ತೆಗೆದುಕೊಳ್ಳುತ್ತೇನೆ. ಶಿವಮೊಗ್ಗದಲ್ಲಿ ಮಧು ಸೋತರು ಸಹ ರಾಜ್ಯದಲ್ಲಿ ಮೈತ್ರಿ ಸರ್ಕಾರ ಗೆದ್ದಿದೆ. ಶಿವಮೊಗ್ಗ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಉಪ ಚುನಾವಣೆಯ ಮತ ಗಳಿಕೆಯೇ ಸಾಕ್ಷಿ ಎಂದರು. ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರವೇ ನಮ್ಮದು ಅದರಲ್ಲಿ ನಾನು ಯಾವತ್ತು ಪಾಲು ಕೇಳುವುದಿಲ್ಲ ಎಂದು ಹೇಳಿದರು.









