ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು,ಬಿಜೆಪಿ ಅಗ್ರಗಣ್ಯ ನಾಯಕರ ಸಮ್ಮುಖದಲ್ಲಿ ಹಿರಿಯ ನಾಯಕನಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.
ವೈದಿಕ ಸಂಪ್ರದಾಯದಂತೆ ಅನಂತ್ ಕುಮಾರ್ ಅಂತ್ಯ ಸಂಸ್ಕಾರ ನಡೆಸಲಾಯಿತು.ನೆಚ್ಚನ ಶಿಷ್ಯನ ಅಗಲಿಕೆಗೆ ಕಂಬನಿ ಮಿಡಿದ ಲಾಲ್ ಕೃಷ್ಣ ಅಡ್ವಾಣಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಆರ್ಎಸ್ಎಸ್ ಸಹ ಕಾರ್ಯಕಾರಿ ಭಯ್ಯಾಜಿ ಜೋಷಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ಕೇಂದ್ರ ವಿಜ್ಞಾನ ಅರಣ್ಯ ಸಚಿವ ಹರ್ಷವರ್ಧನ್, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸಾಮಾಜಿಕ ನ್ಯಾಯ ರಾಜ್ಯಖಾತೆ ಸಚಿವ ರಾಮದಾಸ್ ಅಠವಾಲೆ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಂತಿಮ ನಮನ ಸಲ್ಲಿಸಿದರು.
ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು. ಅನಂತ್ ಕುಮಾರ್ ಪತ್ನಿ ಮತ್ತು ಪುತ್ರಿಯರಿಗೆ ಕಡೆಯ ಬಾರಿ ಮುಖ ನೋಡಲು ಅವಕಾಶ ನೀಡಿದ ಬಳಿಕ ಅನಂತ್ ಕುಮಾರ್ ಸಹೋದರ ನಂದಕುಮಾರ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.45 ನಿಮಿಷಗಳ ಕಾಲ ನಡೆದ ಅಂತ್ಯಕ್ರಿಯೆಯಲ್ಲಿ ಅನಂತಕುಮಾರ್ ಪಂಚಭೂತಗಳಲ್ಲಿ ಲೀನವಾದರು.
ಬೆಳಗ್ಗೆ ನಿವಾಸದಿಂದ ಬಿಜೆಪಿ ಕಚೇರಿಗೆ ಪಾರ್ಥೀವ ಶರೀರವನ್ನು ಸೇನಾ ವಾಹನದಲ್ಲಿ ತರಲಾಯಿತು, ಬಿಜೆಪಿ ಕಚೇರಿಇ1 ಗಂಟೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು ಅಲ್ಲಿಯೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿ ನಂತರ ಮೆರವಣಿಗೆ ಮೂಲಕ ಚಾಮರಾಜಪೇಟೆಯ ರುದ್ರಭೂಮಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.









