ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಇಂದು 8 ಸಚಿವರು ಸೇರ್ಪಡೆಯಾದರು. ರಾಜ್ಯಪಾಲ ವಜುಭಾಯ್ ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.ಏಳು ಮಂದಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ರಹೀಂಖಾನ್ ಇಂಗ್ಲೀಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನೂತನಸಚುವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ಸರಿಯಾಗಿ 5.20 ನಿಮಿಷಕ್ಕೆ ರಾಜಭವನದ ಗಾಜಿನ ಮನೆಗೆ ರಾಜ್ಯಪಾಲರು ಆಗಮಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯಮಂತ್ರಿ ಕುಮಾರಸ್ವಾಮಿ,ಡಿಸಿಎಂ ಪರಮೇಶ್ವರ್ ಹಾಗು ಸಂಪುಟ ಸದಸ್ಯರ ಸಮ್ಮುಖದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಮೊದಲಿಗೆ ಎಂ.ಬಿ ಪಾಟೀಲ್ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ನಂತರ ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವನಚ ಸ್ವೀಕರಿಸಿದರು.ಸತೀಶ್ ಜಾರಕಿಹೊಳಿ ಸಂಪುಟದರ್ಜೆ ಸಚಿವರಾಗಿ ಬುದ್ದ ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಸಿ.ಎಸ್ ಶಿವಳ್ಳಿ ಸಂಪುಟದರ್ಜೆ ಸಚಿವರಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಪಿ.ಟಿ ಪರಮೇಶ್ವರ್ ನಾಯ್ಕ್ ಸಂಪುಟದರ್ಜೆ ಸಚಿವರಾಗಿ ಶ್ರೀ ತುಳಜಾಭವಾನಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಇ.ತುಕಾರಾಂ ಸಂಪುಟದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಹೀಂ ಖಾನ್ ಸಂಪುಟದರ್ಜೆ ಸಚಿವರಾಗಿ ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಎಂಟಿಬಿ ನಾಗರಾಜ್ ಸಂಪುಟದರ್ಜೆ ಸಚಿವರಾಗಿ ಮಂಜುನಾಥಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.









