ಬೆಂಗಳೂರು,ಫೆ.19: ಯಲಹಂಕ ವಾಯುನೆಲೆ ಸಮೀಪ ಸೂರ್ಯ ಕಿರಣ ವಿಮಾನಗಳು ಡಿಕ್ಕಿ ಹೊಡೆದು ಇಬ್ಬರು ಪೈಲಟ್ ಗಳು ಗಾಯಗೊಂಡು ಓರ್ವ ಪೈಲಟ್ ನಾಪತ್ತೆಯಾಗಿರುವ ಘಟನೆ ನಡೆದಿದೆ.ದುರಂತ ಕುರಿತು ಐಎಎಫ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಏರ್ ಶೋನಲ್ಲಿ ಪ್ರದರ್ಶನ ನೀಡಿವ ಸಲುವಾಗಿ ಆಗಮಿಸಿದ್ದ ಸೂರ್ಯಕಿರಣ ವಿಮಾನಗಳು ಇಂದು ಬೆಳಗ್ಗೆ 11.50 ರ ಸಮಯದಲ್ಲಿ ಪೂರ್ವ ತಯಾರಿಗಾಗಿ ಹಾರಾಟ ನಡೆಸುವಾಗ ಎರಡು ವಿಮಾನಗಳು ಡಿಕ್ಕಿ ಹೊಡೆದಿವೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನಿವಾಸ ಸಮೀಪದಲ್ಲಿ ವಿಮಾನಗಳು ಪತನಗೊಂಡಿವೆ.
ವಿಂಗ್ ಕಮಾಂಡರ್ ವಿ.ಟಿ ಶೆಲ್ಕೆ, ಸ್ಕ್ವಾಡ್ರನ್ ಲೀಡರ್ ಟಿ.ಜೆ ಸಿಂಗ್ ಪ್ಯಾರಾಚೂಟ್ ಬಳಸಿ ವಿಮಾನದಿಂದ ಹಾರಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಅವರನ್ನು ಏರ್ ಲಿಫ್ಟ್ ಮೂಲಕ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ, ಮತ್ತೋರ್ವ ಪೈಲಟ್ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಗೆ ತಾಂತ್ರಿಕ ದೋಷ ಕಾರಣ ಎನ್ನಲಾಗಿದ್ದು ದುರಂತ ಸಂಬಂಧ ಎಐಎಫ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ, ಬ್ಲಾಕ್ ಬಾಕ್ಸ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.
ಏರ್ ಶೋಗೆ ಧಕ್ಕೆಯಿಲ್ಲ:
ಸೂರ್ಯ ಕಿರಣ ವಿಮಾನ ದುರಂತ ಪ್ರಕರಣದ ಪರಿಣಾಮ ಏರ್ ಶೋ ಮೇಲೆ ಆಗಲ್ಲ, ನಿರಾತಂಕವಾಗಿ ನಿಗದಿತ ವೇಳಾಪಟ್ಟಿಯಂತೆಯೇ ಏರ್ ಶೋ ನಡೆಯಲಿದೆ ಎಂದು ಎಚ್.ಎ.ಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.








