ದಾವಣಗೆರೆ: ಜೆಡಿಎಸ್ ಜೊತೆ ಲೋಕಸಭೆ ಚುನಾವಣೆ ಸಂಬಂಧ ಸೀಟು ಹಂಚಿಕೆಯ ಚರ್ಚೆ ನಡೆಯುತ್ತಿದೆ,ನಾಳೆ ಈ ಕುರಿತು ಜೆಡಿಎಸ್ ನಾಯಕರೊಂದಿಗೆ ಸಭೆ ನಡೆಸಲಿದ್ದು, ಬಗೆಹರಿಯದ ಕ್ಷೇತ್ರಗಳ ಹಂಚಿಕೆಯನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ದಾವಣಗೆರೆ ಐಬಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಎಲ್ಲ ತಯಾರಿ ಮಾಡುತ್ತಿದೆ. ಅಧ್ಯಕ್ಷರು ಅನೇಕ ಸಭೆ ಮಾಡಿದ್ದಾರೆ. ಚುನಾವಣಾ ಸಮಿತಿ ಸಭೆ ಕೂಡ ಆಗಿದೆ. ಜೊತೆಗೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ನಾವೆಲ್ಲ ಚರ್ಚೆ ಮಾಡಿದ್ದೇವೆ. ಕೆಳಹಂತದಲ್ಲಿ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ನಮ್ಮ ತಯಾರಿ ಆಗಿದೆ. ಸಮ್ಮಿಶ್ರ ಸರಕಾರ ಇರುವುದರಿಂದ ಲೋಕಸಭಾ ಚುನಾವಣೆಗೂ ಒಟ್ಟಾಗಿ ಹೋಗಲಿದ್ದೇವೆ.
ಕೆಪಿಸಿಸಿ ಅಧ್ಯಕ್ಷರು ದೇವೇಗೌಡರ ಜೊತೆ ಮಾತನಾಡಿದ್ದಾರೆ. ನಾಳೆ ನಾನು ಹಾಗೂ ದಿನೇಶ್ ಗುಂಡೂರಾವ್ ಇಬ್ಬರು ಜೆಡಿಎಸ್ ಪಕ್ಷದ ಮುಖಂಡರ ಜೊತೆ ಮಾತನಾಡಲಿದ್ದೇವೆ. ಆ ನಂತರ ಪರಸ್ಪರ ಸೀಟು ಹಂಚಿಕೆ ಮಾಡಲಾಗುತ್ತದೆ.
ಬಗೆಹರಿಯದ ಕ್ಷೇತ್ರವನ್ನು ರಾಹುಲ್ ಗಾಂಧಿ ಅವರ ಹಂತದಲ್ಲಿ ತೀರ್ಮಾನ ಮಾಡಲಿದ್ದೇವೆ. ಬಹುತೇಕ ನಮ್ಮ ಹಂತದಲ್ಲೇ ತೀರ್ಮಾನ ಮಾಡುವ ಭರವಸೆ ಇದೆ ಎಂದರು.
ಏರ್ಶೋನಲ್ಲಿ ನೆನ್ನೆ ನಡೆದ ಘಟನೆ ಬಹಳ ದುರಾದೃಷ್ಟಕ. ಈ ಬಗ್ಗೆ ತನಿಖೆಯಾದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಏರ್ ಶೋನಲ್ಲಿ ಹೆಚ್ಚಿನ ಭದ್ರತೆ ತೆಗೆದುಕೊಳ್ಳಬೇಕಿತ್ತು.
ಕಾರು ಕಳೆದುಕೊಂಡವರಿಗೆ ಯಾವ ರೀತಿ ಪರಿಹಾರ ಎಂಬುದನ್ನು ಚರ್ಚೆ ಮಾಡ್ತೀವಿ ಎಂದರು.
ಆಪರೇಷನ್ ಕಮಲ ಪ್ರಕರಣ ಸಂಬಂಧ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ಪ್ರಕರಣವನ್ನು ಎಸ್ಐಟಿಗೆ ವಹಿಸುತ್ತೇವೆ. ಇದರಿಂದ ಹಿಂದೆ ಸರಿಯೋ ಪ್ರಶ್ನೆ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ರು.
ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ಕಾಯಿದೆಗೆ ನಿಯಮ ಮಾಡಬೇಕಿದೆ. ನಿಯಮ ಮಾಡುವ ಪ್ರಕ್ರಿಯೆ ಕೂಡ ಬಹುತೇಕಪೂರ್ಣವಾಗಿದ್ದು, ನಾಳೆ ಕ್ಯಾಬಿನೆಟ್ಗೆ ತೆಗೆದುಕೊಂಡು ಹೋಗಲಿದ್ದೇವೆ ಎಂದರು.









