ಮೈತ್ರಿ ಸಂಪುಟಕ್ಕೆ ಇಬ್ಬರು ನೂತನ ಸಚಿವರ ಸೇರ್ಪಡೆ!

0
11

ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜಾತ್ಯಾತೀತ ಜನತಾ ದಳ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಶುಕ್ರವಾರ ಅಪರಾಹ್ನ ಇಬ್ಬರು ಪಕ್ಷೇತರರು ಸೇರ್ಪಡೆಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟದ ಸಂಖ್ಯಾಬಲ 33 ಕ್ಕೆ ಏರಿಕೆಯಾಗಿದೆ. ಇನ್ನೂ ಒಂದು ಸಚಿವ ಸ್ಥಾನ ಖಾಲಿ ಉಳಿದಿದೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ಸಮ್ಮುಖದಲ್ಲಿ ರಾಣೇಬೆನ್ನೂರು ವಿಧಾನ ಸಭಾ ಕ್ಷೇತ್ರದ ಸದಸ್ಯ ಆರ್ ಶಂಕರ್ ಹಾಗೂ ಮುಳಬಾಗಿಲು ವಿಧಾನ ಸಭಾ ಕ್ಷೇತ್ರದ ಸದಸ್ಯ ಹೆಚ್ ನಾಗೇಶ್ ಅವರು ಸಂಪುಟ ದರ್ಜೆ ಸಚಿವರಾಗಿ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ನೂತನ ಸಚಿವರಿಗೆ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ಇಬ್ಬರೂ ಸಚಿವರು ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕøತಿ ಸಚಿವ ಡಿ. ಕೆ. ಶಿವಕುಮಾರ್, ಸಾರಿಗೆ ಸಚಿವ ಡಿ ಸಿ ತಮ್ಮಣ್ಣ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ ಜೆ ಜಾರ್ಜ್, ಗೃಹ ಸಚಿವ ಎಂ ಬಿ ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್, ತೋಟಗಾರಿಕಾ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಂ ಸಿ ಮನಗೂಳಿ, ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ವೆಂಕಟರಾವ್ ನಾಡಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್, ಸಕ್ಕರೆ ಸಚಿವ ಆರ್ ಬಿ. ತಿಮ್ಮಾಪೂರ್, , ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಈಶ್ವರ್ ಖಂಡ್ರೆ, ರಾಜ್ಯ ಸಭಾ ಸದಸ್ಯ ಎಲ್. ಹನುಮಂತಯ್ಯ, ಲೋಕಸಭಾ ಸದಸ್ಯ ಡಿ. ಕೆ. ಸುರೇಶ್, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಕೊಂಡಜ್ಜಿ ಮೋಹನ್ ಮತ್ತು ಯು ಬಿ ವೆಂಕಟೇಶ್, ರಾಜ್ಯ ವಿಧಾನ ಸಭಾ ಸದಸ್ಯರಾದ ಕೆ. ಎಂ. ಶಿವಲಿಂಗೇಗೌಡ, ಬಿ ಎ ಬಸವರಾಜು, ಎಸ್ ಟಿ ಸೋಮಶೇಖರ್, ಮುನಿರತ್ನ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರೂ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿನ್ನೆಲೆ :

ಕಳೆದ ಮೇ 23 ರಂದು ಮುಖ್ಯಮಂತ್ರಿಯಾಗಿ ಜಾತ್ಯಾತೀತ ಜನತಾ ದಳದ ಹೆಚ್ ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಡಾ ಜಿ ಪರಮೇಶ್ವರ್ ಅವರನ್ನು ಒಳಗೊಂಡು ರಚಿತವಾದ ದ್ವಿ-ಸದಸ್ಯ ಮೈತ್ರಿ ಸರ್ಕಾರಕ್ಕೆ ಅದೇ ಸಾಲಿನ ಜೂನ್ 6 ರಂದು ನಡೆದ ಸಂಪುಟ ವಿಸ್ತರಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ 14 , ಜಾತ್ಯಾತೀತ ಜನತಾ ದಳದ ಒಂಭತ್ತು, ಬಹುಜನ ಸಮಾಜ ಪಕ್ಷ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ತಲಾ ಓರ್ವರೂ ಸೇರಿದಂತೆ 25 ಸಚಿವರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಅಲ್ಲದೆ, ಅಕ್ಟೋಬರ್ 11 ರಂದು ಬಹುಜನ ಸಮಾಜ ಪಕ್ಷದ ಏಕೈಕ ಸದಸ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮತ್ತೆ ಡಿಸೆಂಬರ್ 22 ರಂದು ನಡೆದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಓರ್ವರೂ ಒಳಗೊಂಡಂತೆ ಇಬ್ಬರನ್ನು ಕೈಬಿಟ್ಟು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಎಂಟು ಸಚಿವರಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಸಕ್ತ ಸಾಲಿನ ಮಾರ್ಚ್ 22 ರಂದು ಕುಂದಗೋಳ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿ ಅವರ ನಿಧನದಿಂದ ಸಚಿವ ಸಂಪುಟದಲ್ಲಿ ಒಂದು ಸ್ಥಾನ ತೆರವಾಗಿತ್ತು. ಇದೀಗ ಮೂರನೇ ಬಾರಿಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ಇದೇ ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿದ್ದ ಓರ್ವರೂ ಒಳಗೊಂಡಂತೆ ಇಬ್ಬರು ಇಬ್ಬರು ಸಚಿವರ ಸೇರ್ಪಡೆಯಾಗಿದೆ.

- Call for authors -

LEAVE A REPLY

Please enter your comment!
Please enter your name here