ಡಿಕೆಶಿ ಬಾಯಿ ಚಪಲ ಬಿಡಲಿ: ಸುಧಾಕರ್

0
0

ಚಿಕ್ಕಬಳ್ಳಾಪುರ : ಮಾತನಾಡಬೇಕು ಎಂಬ ಚಪಲಕ್ಕೆ ಟೀಕೆ ಮಾಡುವುದನ್ನು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ವ್ಯಂಗ್ಯವಾಡಿದ್ದಾರೆ.

ರಾಜ್ಯದ ನಾನಾ ಭಾಗಗಳಲ್ಲಿ ನೆಲಿಸಿದ್ದ ಈಶಾನ್ಯ ರಾಜ್ಯದವರು ಅವರ ಊರುಗಳಿಗೆ ಹಿಂತಿರುಗಲು ರಾಜ್ಯ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ. ಯಡಿಯೂರಪ್ಪ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ, ಬಡವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಒಡಿಶಾ ಮತ್ತು ಮಣಿಪುರ ರಾಜ್ಯದ ಜನರು ಊರುಗಳಿಗೆ ಹಿಂತಿರುಗಲು ಅರಮನೆ ಮೈದಾನದ ಬಳಿ ಜಮಾಯಿಸಿದ್ದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ಇದಕ್ಕೆ ತೀಷ್ಣ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್, “ಬಾಯಿ ಚಪಲಕ್ಕೆ ಮಾತನಾಡುವುದನ್ನು ಅವರು ಇನ್ನಾದರೂ ಬಿಡಬೇಕು. ಅವರಿಗೆ ಮಾತ್ರ ಹೃದಯ ಇದೆಯೇ? ಹಾಗಿದ್ದರೆ ಯಡಿಯೂರಪ್ಪನವರಿಗೆ ಇಲ್ಲವೇ? ಬಾಯಿಗೆ ಬಂದಂತೆ ಮಾತನಾಡುವುದರಿಂದ ಯಾರಿಗೂ ಲಾಭ ಆಗುವುದಿಲ್ಲ ಎಂಬುದನ್ನು ಇನ್ನಾದರೂ ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.

ವಲಸೆ ಕಾರ್ಮಿಕರನ್ನು ಇದುವರೆಗೂ ಅತ್ಯಂತ ಕ್ಷೇಮದಿಂದ ನೋಡಿಕೊಂಡವರು ಯಾರು? ಅವರಿಗೆ ಉಚಿತ ವಸತಿ, ಊಟ, ಔಷಧೋಪಚಾರಗಳನ್ನು ನೀಡಿ ಜತೆಗೆ ತಲಾ ಐದು ಸಾವಿರು ರೂಗಳ ಆರ್ಥಿಕ ನೆರವು ನೀಡಿರುವುದು ಯಡಿಯೂರಪ್ಪನವರ ಸರ್ಕಾರ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಹೌದು, ಶನಿವಾರ ಮಣಿಪುರ ಮತ್ತು ಒಡಿಶಾ ರಾಜ್ಯದವರು ಹಿಂತಿರುಗುವ ವೇಳೆ ಗೊಂದಲ ಆಗಿದೆ. ನಮ್ಮ ಸರ್ಕಾರ ನೀಡಿದ್ದ ಮಾಹಿತಿಗಿಂತ ಐದಾರು ಪಟ್ಟು ಹೆಚ್ಚು ಮಂದಿ ಅಲ್ಲಿನ ಸರ್ಕಾದ ಮಾಹಿತಿ ಆಧರಿಸಿ ಬಂದ ಕಾರಣಕ್ಕೆ ಜನದಟ್ಟಣೆ ಆಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಅವರನ್ನು ಮಾತನಾಡಿಸಿ ಮಾಹಿತಿ ಪಡೆದು ಅಲ್ಲಿಂದಲೇ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಜತೆ ಮೊಬೈಲ್ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದರು.

ಎಲ್ಲರನ್ನೂ ಅವರ ಊರುಗಳಿಗೆ ಸುರಕ್ಷಿತವಾಗಿ ಕಳುಹಿಸಿಕೊಡುವ ಹೊಣೆ ಸರ್ಕಾರ ವಹಿಸಿಕೊಂಡಿದೆ. ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ದಿನವೊಂದಕ್ಕೆ ಒಂದೂವರೆ ಸಾವಿರ ಜನರನ್ನು ರೈಲಿನಲ್ಲಿ ಕಳುಹಿಸಲಾಗುತ್ತಿದೆ. ಏಕಾಏಕಿ ಐದಾರು ಸಾವಿರ ಮಂದಿ ಆಗಮಿಸಿದ್ದರಿಂದ ಗೊಂದಲವಾಗಿದೆ. ಒಂದೆರಡು ದಿನಗಳಲ್ಲಿಎಲ್ಲರನ್ನೂ ಕಳುಹಿಸಿಕೊಡಲಾಗುತ್ತದೆ. ಇನ್ನಷ್ಟು ಹೆಚ್ಚಿನ ಬೋಗಿಗಳನ್ನು ಕೊಡುವಂತೆ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರಿಗೆ ಜನರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ರಾಜ್ಯದ ಎಲ್ಲ ಕುಟುಂಬಗಳಿಗೆ ಒಂದು ತಿಂಗಳ ಪಡಿತರವನ್ನು ವಿತರಿಸಿ ಕಾಳಜಿ ತೋರಿಸಲಿ, ಅದು ಬಿಟ್ಟು ಮಾತನಾಡಬೇಕು ಎಂಬ ಕಾರಣಕ್ಕೆ, ಚಪಲಕ್ಕಾಗಿ ಮಾತನಾಡಿದರೆ ಅವರುಗಳೇ ನಗೆಪಾಟಲೀಗೀಡಾಗುತ್ತಾರೆ ಎಂದೂ ಸಚಿವ ಸುಧಾಕರ್ ತಿರುಗೇಟು ನೀಡಿದರು.

- Call for authors -

LEAVE A REPLY

Please enter your comment!
Please enter your name here