ಬೆಂಗಳೂರು – ಮೇ 28, 2020: ತ್ವರಿತವಾಗಿ ಮತ್ತು ಹೆಚ್ಚಿನ ಸಂಖ್ಯೆಯ ಕೋವಿಡ್ ಮಾದರಿ ಪರೀಕ್ಷೆ ನಡೆಸಲು ಅನುವಾಗುವಂತೆ ವಿಶಿಷ್ಟ ವಿನ್ಯಾಸದ ಸ್ವಾಬ್ ಕಲೆಕ್ಟಿಂಗ್ ಬೂತ್‍ಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಗ್ಲೋವ್ ಬಾಕ್ಸ್ ಟೆಸ್ಟಿಂಗ್ ಬೂತ್ ಹೆಸರಿನ ಈ ವಿಶಿಷ್ಟ ವಿನ್ಯಾಸದ ಬೂತ್‍ಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಇದೊಂದು ವಿಶೇಷ ರೀತಿಯ ಮೊಬೈಲ್ ಸ್ವಾಬ್ ಸ್ವೀಕೃತಿ ಬೂತ್ ಆಗಿದ್ದು ಪರೀಕ್ಷಿಸುವವರಿಗೆ ಹಾಗೂ ಪರೀಕ್ಷೆಗೆ ಒಳಗಾಗುವವರಿಗೆ ಸೋಂಕು ತಗುಲುವ ಯಾವುದೇ ಅಪಾಯವಿಲ್ಲದೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸಬಹುದೆಂದು ತಿಳಿಸಿದ್ದಾರೆ.
ಗ್ಲಾಸ್ ಬಾಕ್ಸ್ ಒಳಗಿನಿಂದ ಮಾದರಿಗಳನ್ನು ಸ್ವೀಕರಿಸುವ ವಿನ್ಯಾಸ ಹೊಂದಿರುವ ಈ ಬೂತ್‍ಗಳಲ್ಲಿ, ಪರೀಕ್ಷಾ ಮಾದರಿ ನೀಡುವ ವ್ಯಕ್ತಿಯು ಹೊರಗಿನಿಂದಲೇ ಸ್ಯಾಂಪಲ್ ನೀಡಬಹುದಗಿದೆ. ಇದರಿಂದ ನೇರ ಸಂಪರ್ಕವಿಲ್ಲದೆ ಶಂಕಿತರ ರಕ್ತಮಾದರಿಗಳನ್ನು ಪಡೆಯಬಹುದಾಗಿರುವುದರಿಂದ ಉಭಯ ಕಡೆಯಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಅತ್ಯಂತ ವಿರಳವಾಗಿವೆ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಪಿಪಿಇ ಕಿಟ್ ಅವಶ್ಯಕತೆ ಇಲ್ಲದೆ ಕಡಿಮೆ ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸಬಹುದಾದ ಈ ಬೂತ್‌ಗಳು ಪರೀಕ್ಷಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ. ಕೋವಿಡ್ ವಿರುದ್ಧದ ಸಮರದಲ್ಲಿ ಇದು ಮಹತ್ವದ ಪಾತ್ರ ವಹಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಕೊರೋನ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಟೆಸ್ಟಿಂಗ್‍ಗೆ ಹೆಚ್ಚಿನ ಒತ್ತು ನೀಡುತ್ತಿರುವ ಕರ್ನಾಟಕ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಈ ನಿಟ್ಟಿನಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ಬೂತ್ ಸಿದ್ಧಪಡಿಸಿರುವುದಕ್ಕಾಗಿ ಲ್ಯಾಮ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್‍ನ ಇಂಜಿನಿಯರ್‌ಗಳು ಮತ್ತು ವಿವಿಧ ತಜ್ಞ ವೈದ್ಯರುಗಳನ್ನು ಅಭಿನಂದಿಸಿರುವ ಸಚಿವ ಸುಧಾಕರ್ ಅವರು ಈ ಬೂತ್‍ಗಳನ್ನು ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಮತ್ತು ಸೋಂಕು ಹೆಚ್ಚಿರುವ ಹಾಟ್ ಸ್ಪಾಟ್‌ಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವರು ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ಯಾಸ್ಟ್ರೋಎಂಟೆರಾಲಜಿಯ ಕಟ್ಟಡದ ಪರಿವೀಕ್ಷಣೆ ನಡೆಸಿದರು.









