ಬೆಂಗಳೂರು:ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರ ಮೇಲೆ ರಾಜ್ಯ ಸರ್ಕಾರ ಒತ್ತಡ ತಂತ್ರ ಹೇರುತ್ತಿರುವುದು ಖಂಡನೀಯ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರೋನಾ ಸೋಂಕು ಸಮುದಾಯಕ್ಕೆ ವ್ಯಾಪಿಸುವ ಭೀತಿಯಲ್ಲಿರುವಾಗ ಬೆದರಿಕೆಯ ಅಸ್ತ್ರ ಬಳಸುವ ಮೂಲಕ ಉಪನ್ಯಾಸಕರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.
ಸೂಕ್ತ ವಸತಿ,ಸಾರಿಗೆ ಮತ್ತು ಹೋಟೆಲ್ ಸೌಲಭ್ಯ ಇಲ್ಲದಿರುವಾಗ ಹೊರ ಜಿಲ್ಲೆಗಳಿಗೆ ಹೋಗಿ ಉಪನ್ಯಾಸಕರು ಮೌಲ್ಯಮಾಪನ ಮಾಡುವುದು ಬಲು ಕಷ್ಟ. ಯಾವುದೇ ಕನಿಷ್ಠ ಸೌಲಭ್ಯಗಳನ್ನು ಒದಗಿಸದೆ ಮೌಲ್ಯಮಾಪನಕ್ಕೆ ಒತ್ತಡ ತಂತ್ರ ಅನುಸರಿಸುತ್ತಿರುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಉಪನ್ಯಾಸಕರನ್ನು ನಿಯೋಜಿಸುವ ಮೊದಲು ವಿಕೇಂದ್ರೀಕರಣ ವ್ಯವಸ್ಥೆಯಾಗಬೇಕು. ಡಿಡಿಪಿಐ ಗಳು, ಜಿಲ್ಲಾಧಿಕಾರಿಗಳಿಂದ ಮೌಲ್ಯಮಾಪನಕ್ಕೆ ಬರದಿದ್ದರೆ ವೇತನರಹಿತ ರಜೆ ಎಂಬ ‘ಧಮ್ಕಿ’ ಹಾಕಿ ಸುತ್ತಿರುವುದು ಸರ್ಕಾರದ ಅವಿವೇಕದ ಕ್ರಮ, ಪಿಯುಸಿ ಎಕ್ಸಾಮ್ ಮುಗಿಯಲು ಜೂನ್ 18 ರವರೆಗೆ ಕಾಲಾವಕಾಶ ಇದೆ. ಸರ್ಕಾರ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ” ಪ್ರಯೋಗ ಮಾಡಲು ಮುಂದಾಗಿರುವುದನ್ನು ತಕ್ಷಣ ಸ್ಥಗಿತ ಗೊಳಿಸುವಂತೆ ಒತ್ತಾಯಿಸಿದ್ದಾರೆ.









