ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸ್ಥಾನ ವಂಚಿತ ಶಾಸಕರ ಬಂಡಾಯ ಎದುರಾಗಿದ್ದರೆ, ಜೆಡಿಎಸ್ ಪಕ್ಷದ ಸಚಿವರಲ್ಲಿ ನಿರೀಕ್ಷಿತ ಖಾತೆ ದೊರೆಯದ ಅಸಮಾಧಾನ ಹೆಚ್ಚಾಗಿದೆ. ಸಚಿವರ ಬೆಂಬಲಿಗರು ಬೇರೆ ಖಾತೆಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಮೊದಲು ಮಂತ್ರಿಯಾಗಬೇಕು ಅಂತಾರೆ , ಬಳಿಕ ವಿಧಾನಸೌಧದ 3 ನೇ ಮಹಡಿಯಲ್ಲಿ ಕೊಠಡಿಯೇ ಬೇಕು ಅಂತಾರೆ, ಇಂತದ್ದೇ ಮನೆ ಬೇಕು, ಇಂತದ್ದೇ ಖಾತೆ ಬೇಕು ಎನ್ನುತ್ತಾರೆ ಉತ್ತಮವಾಗಿ ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು ಎಂದು ಕಿಡಿ ಕಾರಿದರು.
ಸಮರ್ಥವಾಗಿ ಕೆಲಸ ಮಾಡಲು ಎಲ್ಲಾ ಇಲಾಖೆಗಳಲ್ಲೂ ಅವಕಾಶಗಳಿವೆ. ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು? ಸಣ್ಣ ನೀರಾವರಿಗಿಂತ, ಉನ್ನತ ಶಿಕ್ಷಣಕ್ಕಿಂತ ಬೇರೆ ಖಾತೆ ಬೇಕೆ? ಯಾವ ಖಾತೆ ಬೇಕು ನೀವೆ ಹೇಳಿ, ಹಣಕಾಸು ಖಾತೆ ನೀಡಲೇ ಎಂದು ಪ್ರತಿಭಟನೆಗಿಳಿದಿರುವ ಜಿ.ಟಿ.ದೇವೇಗೌಡ ಮತ್ತು ಸಿ.ಎಸ್.ಪುಟ್ಟರಾಜು ಬೆಂಬಲಿಗರನ್ನು ಖಾರವಾಗಿ ಪ್ರಶ್ನಿಸಿದರು.









