ಮುಧೋಳ,ಜೂ.17: ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆ ಅನುದಾನದಲ್ಲಿ ನಾಲ್ಕು ವಾಹನ ಚಾಲನಾ ತರಬೇತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.
ಮುಧೋಳ್ ನಗರದಲ್ಲಿಂದು ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಧೋಳ್, ಕೊಪ್ಪಳ, ಅಥಣಿ ಮತ್ತು ಸವದತ್ತಿಯಲ್ಲಿ ವಾಹನ ಚಾಲನಾ ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲಾಗುವುದು. ಕರ್ನಾಟಕ ಸಾರಿಗೆ ಸಂಸ್ಥೆಗೆ 60 ಕೋಟಿ ರೂ ಬಿಡುಗಡೆ ಮಾಡಲಾಗುತ್ತಿದ್ದು, ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಶೀಘ್ರವಾಗಿ ಮುಧೋಳ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮುಧೋಳ್ ನಲ್ಲಿ 5, ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಕೋವಿವ್ 19 ರ ಸಂಕಷ್ಟ ದಲ್ಲಿ ಕರ್ನಾಟಕ ಸರ್ಕಾರ ಅತ್ಯುತ್ತಮ ಹಾಗೂ ಮಾದರಿಯುತವಾಗಿ ಮುಂಜಾಗ್ರತಾ ಹಾಗೂ ಪರಿಹಾರ ಕಾರ್ಯವನ್ನು ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಚಾಲಕರಿಗೆ, ಆಟೋ ಚಾಲಕರಿಗೆ ಕುಲ ಕಸುಬು ದಾರರಿಗೆ, ಹೂ ಬೆಳೆಗಾರರಿಗೆ ಪರಿಹಾರ ನೀಡಲಾಗಿದೆ. ಇದಕ್ಕಾಗಿ 2280 ಕೋಟಿ ರೂ ಬಿಡುಗಡೆ ಮಾಡಿದೆ.ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 45ಸಾವಿರ ಜನರಿಗೆ ಆಶ್ರಯ ನೀಡಲಾಗಿದೆ. ಬೇರೆ ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೂ ವೇತನ ಕಡಿತಗೊಳಿಸಿದೆ. ಆದರೆ ಕರ್ನಾಟಕ ಸರ್ಕಾರ ಪೂರ್ಣ ಪ್ರಮಾಣದಲ್ಲಿ ವೇತನ ನೀಡುತ್ತಿದೆ. ಕೇಂದ್ರ ಸರ್ಕಾರವೂ ಅತ್ಯುತ್ತಮ ವಾಗಿ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಡಿಸಿಎಂ ಲಕ್ಷಣ ಸವದಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿಯವರಾದ ಕ್ಯಾಪ್ಟನ್ ಡಾ. ರಾಜೇಂದ್ರ ,ಎಸ್ ಪಿ ಲೋಕೇಶ್ ಜಗಲಾಸರ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಮತ್ತಿತರರು ಉಪಸ್ಥಿತರಿದ್ದರು.









