ರಾಜೀವ್ ಗಾಂಧಿ ವಿವಿ ಕ್ಯಾಂಪಸ್ ಕಾಮಗಾರಿಗೆ ಶೀಘ್ರ ಚಾಲನೆ: ಡಿಸಿಎಂ ಘೋಷಣೆ

0
2

ರಾಮನಗರ: ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ರಾಮನಗರದ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ತ್ವರಿತವಾಗಿ ಚಾಲನೆ ನೀಡಲಾಗುವುದು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿವಾದ ಇದ್ದು, ಕೋವಿಡ್ ಬಿಕ್ಕಟ್ಟು ಹತೋಟಿಗೆ ಬಂದ ಕೂಡಲೇ ಆ ಪ್ರಕ್ರಿಯೆಗಳಿಗೆ ಬಿರುಸಿನ ಚಾಲನೆ ನೀಡಲಾಗುವುದು ಎಂದು ಉಪ ಮಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ರಾಮನಗರದಲ್ಲಿ ಶುಕ್ರವಾರ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜೀವ್ ಗಾಂಧಿ ವಿವಿ ಸ್ಥಳಾಂತರಕ್ಕೆ ಸಂಬಂಧಿಸಿ ಕಾನೂನಾತ್ಮಕ ತೊಡಕಿದೆ. ಹೈಕೊರ್ಟಿನಲ್ಲಿ ಅರ್ಜಿಯೊಂದು ಇತ್ಯರ್ಥವಾಗಬೇಕಿದ್ದು, ಕೋವಿಡ್ ಕಾರಣಕ್ಕೆ ನ್ಯಾಯಾಲಯದ ಕಲಾಪ ನಡೆಯದೇ ಅದರ ವಿಲೇವಾರಿ ವಿಳಂಬವಾಗಿದೆ. ಈ ಅರ್ಜಿ ಇತ್ಯರ್ಥವಾದ ತಕ್ಷಣವೇ ಕಾಮಗಾರಿ ಆರಂಭಿಸಿ ಕಾಲಮಿತಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ವಿವಿ ಸ್ಥಳಾಂತರದ ಜತೆಯಲ್ಲಿಯೇ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೆಲ್ತ್ ಸಿಟಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಎರಡು ಯೋಜನೆಗಳು ಸಾಕಾರಗೊಂಡ ಮೇಲೆ ರಾಮನಗರದ ಚಿತ್ರಣವೇ ಬದಲಾಗಲಿದೆ ಎಂದು ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ನಿಯಂತ್ರಣಕ್ಕೆ ಕ್ರಮ:
ಹಸಿರು ವಲಯವಾಗಿದ್ದ ಜಿಲ್ಲೆಯಲ್ಲಿ ಈಗ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಡಿಸಿಎಂ, ಆಸ್ಪತ್ರೆಗಳಲ್ಲಿ ಕಠಿಣ ಎಚ್ಚರಿಕೆ ವಹಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದಯಾನಂದ ಸಾಗರ್ ಆಸ್ಪತ್ರೆಯವರು ಜಿಲ್ಲೆಗೆ 200 ಬೆಡ್ ಗಳನ್ನು ನೀಡುವ ಭರವಸೆ ನೀಡಿದ್ದಾರೆ. ನಾನೇ ಖುದ್ದಾಗಿ ಆ ಆಸ್ಪತ್ರೆಯ ಆಡಳಿತ ಮಂಡಳಿಯವರ ಜತೆ ಮಾತಾನಾಡಿದ್ದೇನೆ. ಕೂಡಲೇ ಅವರನ್ನು ಸಂಪರ್ಕಿಸಿ ಬೆಡ್ ಗಳನ್ನು ಪಡೆದುಕೊಳ್ಳುವಂತೆ ಡಿಸಿಎಂ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಕೋವಿಡ್ ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಂದು ದೂರೂ ಬರಬಾರದು. ಔಷಧಿ, ಫಲ್ಮ್ ಮೀಟರ್ ಸೇರಿ ಸಪ್ಲೈ ಚೈನಿನಲ್ಲಿ ಯಾವುದೇ ವ್ಯತ್ಯಯವಾಗಬಾರದು. ದಿನೇದಿನೆ ಆ ವ್ಯವಸ್ಥೆ ಸುಧಾರಿಸುತ್ತಿರಬೇಕು. ಸ್ವಯಂ ಸೇವಕರಿಗೆ ಸರಿಯಾದ ಮಾರ್ಗದರ್ಶನ ನೀಡಿ ಜವಾಬ್ದಾರಿ ವಹಿಸಬೇಕು. ಪ್ರತಿ ತಾಲ್ಲೂಕಿನಲ್ಲಿಯೂ ಇಬ್ಬರಿಂದ ಮೂವರು ಫಿಜಿಶಿಯನ್ನುಗಳು ಇರುವಂತೆ ನೋಡಿಕೊಳ್ಳಬೇಕು. ಕ್ವಾರಂಟೈನ್ ನಲ್ಲಿ ಇರುವ ಸೋಂಕಿತರಿಗೆ ಗುಣಮಟ್ಟದ ಆಹಾರ ಪೂರೈಸಬೇಕು. ಈ ಬಗ್ಗೆ ಯಾರೂ ದೂರುವಂತಿರಬಾರದು. ಕೋವಿಡ್ ನಿರ್ವಹಣೆಯಲ್ಲಿ ರಾಮನಗರ ಇಡೀ ರಾಜ್ಯಕ್ಕೆ ಮಾದರಿಯಾಗಿರಬೇಕು ಎಂದು ಉಪ ಮುಖ್ಯಮಂತ್ರಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಬೆಳೆ ವಿಮೆ-ಡಿಸಿಎಂ ಗರಂ:
ರೈತರಿಗೆ ಬೆಳೆ ವಿಮೆ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕಾಪೋರೇಷನ್ ಬ್ಯಾಂಕ್ ಬಗ್ಗೆ ಉಪ ಮುಖ್ಯಮಂತ್ರಿ ಗರಂ ಆದ ಪ್ರಸಂಗ ಕೆಡಿಪಿ ಸಭೆಯಲ್ಲಿ ನಡೆಯಿತು. ಮೂರು ವರ್ಷವಾದರೂ ಬ್ಯಾಂಕಿನಿಂದ ವಿಮೆ ಮೊತ್ತ ಬಂದಿಲ್ಲ. ರೈತರು ಬ್ಯಾಂಕ್ ಮತ್ತು ಕಂದಾಯ ಇಲಾಖೆ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಡಿಸಿಎಂ ಗಮನ ಸೆಳೆದಾಗ, ಈ ಬಗ್ಗೆ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರಲ್ಲದೆ ಒಂಬುಡ್ಸಮನ್ ಗೆ ದೂರು ನೀಡುವಂತೆ ಆದೇಶಿಸಿದರು.

ಇದೇ ವೇಳೆ ರೈತರಲ್ಲಿ ಸಾಗುವಳಿ ಚೀಟಿ ಇದ್ದರೂ ಖಾತೆ ಆಗುತ್ತಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಅವರು ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಂಬಂಧಿಸಿ ಯಾವುದೇ ದೂರೂ ಬರುವಂತಿಲ್ಲ. ಅವರ ಕೆಲಸಗಳು ಆದ್ಯತೆಯ ಮೇರೆಗೆ ಆಗಬೇಕು. ತತ್ ಕ್ಷಣವೇ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹಾರ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಜತೆಗೆ, ರೈತರಿಗೆ ಭಿತ್ತನೆ ಬೀಜ, ರಸಗೊಬ್ಬರಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದೂ ಅವರು ಆದೇಶಿಸಿದರು.

ಅರ್ಕಾವತಿ ಪ್ರದೇಶಾಭಿವೃದ್ಧಿ:
ರಾಮನಗರ ಪಟ್ಟಣದಲ್ಲಿಯೇ ಅರ್ಕಾವತಿ ನದಿ ಸುಮಾರು ಐದು ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಅದರ ಆಮೂಲಾಗ್ರ ಅಭಿವೃದ್ಧಿಗೆ ಒತ್ತು ನೀಡಲೇಬೇಕು. ಜತೆಗೆ, ಈ ವ್ಯಾಪ್ತಿಯಲ್ಲಿನ ಜಲಮೂಲಗಳನ್ನು ರಕ್ಷಿಸಬೇಕು. ಸರಕಾರ ಈ ಬಗ್ಗೆ ಹೆಚ್ಚು ಬದ್ಧತೆಯಿಂದ ಕೆಲಸ ಮಾಡಲಿದೆ. ಈ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚಿಸಿದರು.

ಪ್ರವಾಸೋದ್ಯಮಕ್ಕೆ ಒತ್ತು: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು‌ ನೀಡಬೇಕು. ಇದಕ್ಕೆ ಬೇಕಾಗುವ ಸಹಕಾರವನ್ನು ಎಲ್ಲ ಇಲಾಖೆಗಳಿಂದ ನೀಡಬೇಕು ಎಂದು ಅವರು‌ ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಗಣಿಗಾರಿಕೆಗೆ ಕಡಿವಾಣ:
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುವವರು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಅದ್ಯತೆ ನೀಡಬೇಕು ಎಂದು ಹೇಳಿದರು.
ಕಲ್ಲು ಗಣಿಗಾರಿಕೆ ಎಲ್ಲ ಕಡೆ ನಡೆಯುತ್ತಿದೆ. ಆದರೆ ಕಾನೂನಾತ್ಮಕವಾಗಿ ನಡೆಯಲಿ ಎಂಬುದು ನನ್ನ ಅನಿಸಿಕೆ ಎಂದರು.

ತ್ರೈಮಾಸಿಕ ಸಭೆ:
ಜಿಲ್ಲೆಯ ಪ್ರಗತಿ ಪರಿಶೀಲನಾ ಪ್ರತೀ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯಲಿದೆ. ಸಭೆಯಿಂದ ಸಭೆಗೆ ಅಭಿವೃದ್ಧಿಯ ಫಲಿತಾಂಶದ ಹೆಗ್ಗುರುತುಗಳು ಕಾಣಬೇಕು. ಅಧಿಕಾರಿಗಳು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಕರ್ತವ್ಯಲೋಪವನ್ನು ಸಹಿಸುವ ಪ್ರಶ್ನೆ ಇಲ್ಲ. ನಾನು ಬರುವ ಎಲ್ಲ ದಿನ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಮುಂತಾದವರು ಭಾಗಿಯಾಗಿದ್ದರು.

- Call for authors -

LEAVE A REPLY

Please enter your comment!
Please enter your name here