ದೇವೇಗೌಡರು ಪ್ರತಿಭಟನೆಗೆ ಮುಂದಾಗಬಾರದು : ಡಾ.ನಾರಾಯಣಗೌಡ

0
5

ಮಂಡ್ಯ: ಮಾಜಿ ಪ್ರಧಾನಿಯಾದ ದೇವೇಗೌಡರು ಪ್ರತಿಭಟನೆಗೆ ಮುಂದಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ನಾರಾಯಣಗೌಡ ಮನವಿ ಮಾಡಿದ್ದಾರೆ.

ದೇವೇಗೌಡರು ನನಗೆ ತಂದೆ ಸಮಾನ. ಅವರಿಂದಲೇ ರಾಜಕೀಯದಲ್ಲಿ ಬೆಳೆದವನು. ಅವರ ಮಾತನ್ನ ಆಶೀರ್ವಾದ ಎಂದು ಭಾವಿಸುತ್ತೇನೆ. ಆದರೆ ಕಲ್ಲುಗಣಿಗಾರಿಕೆ ವಿಚಾರದಲ್ಲಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ತಕ್ಷಣ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಬಳಿಕ ದೇವೇಗೌಡರು ಸಮಯ ನೀಡಿದರೆ ಅವರ ಹೇಳಿದ ಸ್ಥಳಕ್ಕೆ ಹೋಗಿ ಮಾಹಿತಿ ಒದಗಿಸುತ್ತೇನೆ ಎಂದರು.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಗೆ ಭೇಟಿ ನೀಡಿದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ದೇವೇಗೌಡರು ಪ್ರತಿಭಟನೆ ಮಾಡಬಾರದು, ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮಂಜು ಎನ್ನುವವರು ಎರಡು ಕ್ವಾರಿಗೆ ಪರವಾನಿಗೆ ಪಡೆದಿದ್ದರು. ಆದ್ರೆ 9 ಕೋಟಿ ರೂ. ರಾಯಲ್ಟಿ ಬಾಕಿ ಉಳಿಸಿಕೊಂಡಿದ್ದಾರೆ. ಜೊತೆಗೆ ಕ್ವಾರಿಯಿಂದ ಸಾಹುಕಾರ್ ಚನ್ನಯ್ಯ ನಾಲೆಗೆ ಧಕ್ಕೆಯಾಗಿತ್ತು. ವಾರಗಳ ಕಾಲ ನೀರು ನಿಲ್ಲಿಸಿ, ನಾಳೆ ದುರಸ್ತಿ ಮಾಡಿಸಲಾಗಿತ್ತು. ಇದೆಲ್ಲವು ಕುಮಾರಸ್ವಾಮಿ ಅವರ ಸರಕಾರ ಇದ್ದಾಗಲೇ ಆಗಿತ್ತು. ಆ ಸಂದರ್ಭದಲ್ಲೇ ಕ್ವಾರಿಯನ್ನ ನಿಲ್ಲಿಸಲು ಆದೇಶ ಮಾಡಲಾಗಿತ್ತು. ಈ ಎಲ್ಲ ವಿಚಾರವನ್ನು ದೇವೇಗೌಡರ ಗಮನಕ್ಕೆ ತರಲಿಲ್ಲ. ಹಾಗಾಗಿ ದೇವೇಗೌಡರು ಆರೋಪ ಮಾಡಿದ್ದಾರೆ ಅಷ್ಟೆ. ಜಿಲ್ಲೆಯ ಎಲ್ಲ ಶಾಸಕರಿಗೂ ಈ ವಿಚಾರ ತಿಳಿದಿದೆ. ಪುಟ್ಟರಾಜು ಅವರು ಉಸ್ತುವಾರಿ ಸಚಿವರಾಗಿದ್ದರು. ಅವರಿಗೂ ಮಾಹಿತಿ ಇದೆ. ದೇವೇಗೌಡರ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ಅಧಿಕಾರಿಗಳನ್ನು ಕರೆದು ಸಭೆ ಮಾಡುತ್ತಿದ್ದೇನೆ. ಸಂಪೂರ್ಣ ಮಾಹಿತಿ ಪಡೆದು ಮುಖ್ಯಮಂತ್ರಿಗಳಿಗೆ ನೀಡುತ್ತೇನೆ. ಗಣಿ ಇಲಾಖೆ ಸಚಿವರ ಗಮನಕ್ಕೂ ತರುತ್ತೇನೆ. ಬಳಿಕ ದೇವೇಗೌಡರಿಗೂ ಮಾಹಿತಿ ಒದಗಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಜಿಲ್ಲೆಯ ಅಭಿವೃದ್ಧಿಗೆ ನಾನು ಶ್ರಮಿಸುತ್ತಿದ್ದೇನೆ. ದೇವೇಗೌಡರು ತುಂಬಾ ಹಿರಿಯರು. ನಾನು ಈಗಷ್ಟೆ ರಾಜಕೀಯದಲ್ಲಿ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ. ಎಲ್ಲರ ಸಹಕಾರದಿಂದ ಅಭಿವೃದ್ಧಿ ಸಾಧ್ಯ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

- Call for authors -

LEAVE A REPLY

Please enter your comment!
Please enter your name here