ಹುಬ್ಬಳ್ಳಿ,ಜೂನ್.28:ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮುಂದಾಗಬೇಕು.ಸರ್ಕಾರ ಈಗಾಗಲೇ ದರ ನಿಗದಿಪಡಿಸಿದ್ದು,ಅದರಂತೆ ಖಾಸಗಿ ಆಸ್ಪತ್ರೆಗಳು ನಡೆದುಕೊಳ್ಳಬೇಕು.ಕೊರೊನಾ ನಿಯಂತ್ರಣದಲ್ಲಿ ಜನರ ಜವಾಬ್ದಾರಿಯೂ ಬಹಳಯಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಲ್ಲಿನ ಸರ್ಕಿಟ್ ಹೌಸ್‌ನಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಾಕ್ಡೌನ್ ನಿರ್ಬಂಧ ತೆರವುಗೊಂಡಿದೆಯೇ ಹೊರತು ಕೊರೊನಾ ಹೋಗಿಲ್ಲ.ಕೊರೊನಾ ಸೋಂಕು ಪಸರಿಸದಂತೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡು ಜವಾಬ್ದಾರಿಯಿಂದ ನಡೆಯುತ್ತಿದೆ.ಕೊರೊನಾ ಸೋಂಕು ಪಸರಿಸದಂತೆ
ಜನರು ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಸೇರಿದಂತರ ತಿಳುವಳಿಕೆಯಿಂದ ಜಾಗೃತಿಯಿಂದ ನಡೆದುಕೊಳ್ಳಬೇಕು ಎಂದರು.
ಭಾನುವಾರ ಮಾತ್ರ ಲಾಕ್ಡೌನ್‌ಗೆ ಸರ್ಕಾರ ಕ್ರಮಕೈಗೊಂಡಿದ್ದು ಒಳ್ಳೆಯದೇ.ಸಂಪೂರ್ಣ ಲಾಕ್ ಡೌನ್ ಮಾಡಬಾರದು ಎನ್ನುವುದು ಕೂಡ ತಮ್ಮ ಅಭಿಪ್ರಾಯವಾಗಿತ್ತು ಎಂದರು.
ಸೋಯಾಬಿನ್ ಬಿತ್ತನೆ ಬೀಜದ ಬಗ್ಗೆ ಸಾಕಷ್ಟು ತೊಂದರೆಯಾಗಿರುವ ಬಗ್ಗೆ ದೂರುಗಳು ಬಂದಿವೆ.
ಯಾವುದೇ ಕಂಪನಿಯ ಬೀಜ ಇರಲಿ.ಮೊಳಕೆ ಬರದೇ ನಷ್ಟವಾಗಿದ್ದರ ಬಗ್ಗೆ ಇಲಾಖೆ ಕ್ರಮಕೈಗೊಳ್ಳುತ್ತಿದೆ.ರಸಗೊಬ್ಬರದ ಕೊರತೆಯಾಗಲೀ ಬಿತ್ತನೆಬೀಜಕ್ಕೆ ತೊಂದರೆಯಾಗಲೀ ಯಾವುದೇ ಸಮಸ್ಯೆಯಿಲ್ಲ.ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಇದೆ ಎಂದು ಬಿ.ಸಿ.ಪಾಟೀಲರು ಹೇಳಿದರು.









