ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಲ್ಲಿ ಹಾಲಿ ಮಾಜಿಗಳ ನಡುವಿನ ದ್ವೇಷದ ರಾಜಕೀಯಕ್ಕೆ ಡಾ.ಬಿಆರ್ ಅಂಬೇಡ್ಕರ್ ಬಯಲು ರಂಗ ಮಂದಿರ ವೇದಿಕೆಯಾಗಿದೆ.
2016ರಲ್ಲಿ ಹೆಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ 3ಕೋಟಿ 12ಲಕ್ಷ ವೆಚ್ವದಲ್ಲಿ ಅಂಬೇಡ್ಕರ್ ಬಯಲು ರಂಗ ಮಂದಿರ ನಿರ್ಮಾಣ ಮಾಡಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೆಚ್.ಆಂಜನೇಯ ಸೋತಿದ್ದಾರೆ. ಅವರ ವಿರುದ್ದ ವಿಜಯ ಸಾಧಿಸಿ ಶಾಸಕರಾಗಿರುವ ಬಿಜೆಪಿಯ ಎಂ.ಚಂದ್ರಪ್ಪ ಹೆಚ್ಚುವರಿ ಅನುದಾನದಲ್ಲಿ ಬಯಲು ರಂಗ ಮಂದಿರದ ಅಭಿವೃದ್ಧಿಗೆ ಮುಂದಾಗಿದ್ದು, ಬಯಲು ರಂಗ ಮಂದಿರಕ್ಕೆ ಅಂಬೇಡ್ಕರ್ ಹೆಸರು ಬದಲಾಯಿಸಿ ವಾಲ್ಮೀಕಿ ಹೆಸರಿಡಲು ತೀರ್ಮಾನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಅಂಬೇಡ್ಕರ್ ಹೆಸರು ಬದಲಾಯಿಸುವ ವಿಚಾರ ತಿಳಿದ ದಲಿತ ಮುಖಂಡರುಗಳು ಇಂದು ಶಾಸಕ ಚಂದ್ರಪ್ಪಗೆ ಮುತ್ತಿಗೆ ಹಾಕಲು ಮುಂದಾದ್ರು. ಈ ವೇಳೆ ದಲಿತ ಮುಖಂಡರನ್ನು ವಶಕ್ಕೆ ಪಡೆದ ಹೊಳಲ್ಕೆರೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ರು. ಅದೇ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಆಂಜನೇಯ ಹಾಗು ಕಾಂಗ್ರೆಸ್ ಮುಖಂಡರು ಹೆಚ್ಚುವರಿ ಕಾಮಗಾರಿಗೆ ತೆಗೆಯಲಾಗಿದ್ದ ಗುಂಡಿಗಳನ್ನು ಮುಚ್ಚಿಸಿ, ಅಂಬೇಡ್ಕರ್ ಹೆಸರು ಬದಲಾಯಿಸಲು ಬಂದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.









