ಚಿತ್ರದುರ್ಗ: ಮುಂದಿನ ಎರಡು ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಹೀಗಾಗಿ ಮಹಾಮಾರಿಯಿಂದ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸರ್ಕಾರದ ಕರ್ತವ್ಯವನ್ನು ದೇವರ ಹೆಗಲಿಗೆ ಹಾಕಿದ್ದಾರೆ.
ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವದಲ್ಲೇ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ನಮ್ಮಲ್ಲೂ ಕೂಡ ಮುಂದಿನ ಎರಡು ತಿಂಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ರು. ಸೋಂಕು ಹೆಚ್ಚಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ, ಸಚಿವರ ಹೊಂದಾಣಿಕೆಯ ಕೊರತೆಯೇ ಕಾರಣ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದ ಮಾತು, ಇವತ್ತು ಕೊರೊನಾ ನಿಯಂತ್ರಣ ಯಾರ ಕೈಯಲ್ಲಿದೆ ಹೇಳಿ? ದೇವರೇ ನಮ್ಮನ್ನು ಕಾಪಾಡಬೇಕು, ಕಾಂಗ್ರೆಸ್ ನವರು ಇಂತಹ ಸಮಯದಲ್ಲಿ ರಾಜಕಾರಣ ಮಾಡಬಾರದು, ಅವರಿಗೆ ಶೋಭೆ ತರುವುದಿಲ್ಲ, ನಾವೇನಾದರೂ ತಪ್ಪು ಮಾಡಿದ್ದರೆ ಪ್ರಾಯಶ್ಚಿತ್ತ ನಿಭಾಯಿಸಲು ಸಿದ್ದರಿದ್ದೇವೆ ಎಂದರು.
ಈ ಮೂಲಕ ಇನ್ನೆರಡು ತಿಂಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಆರೋಗ್ಯ ಸಚಿವರು, ತಮ್ಮಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡು ಜವಬ್ದಾರಿಯಿಂದ ಕೈಚೆಲ್ಲಿದ್ದಾರೆ.








